ಕದ್ರಿ ಗೋಪಾಲ್ ನಾಥ್ ನೈಜ ನಾದಯೋಗಿ: ಪ್ರೊ.ಅರವಿಂದ ಹೆಬ್ಬಾರ್

Update: 2019-10-18 14:00 GMT

ಉಡುಪಿ, ಅ.18: ಅಪೂರ್ವವಾದ ಕಲಾತಪಸ್ಸು, ಪ್ರಯೋಗಶೀಲತೆಗಳಿಂದ ಸ್ಯಾಕ್ಸೋಫೋನ್‌ನಂಥ ಪಾಶ್ಚಾತ್ಯ ವಾದ್ಯಕ್ಕೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅಳವಡಿಸಿ, ಎಂ.ಬಾಲಮುರಳೀಕೃಷ್ಣರಂಥ ನೂರಾರು ಮಹಾನ್ ಕಲಾವಿದರು ಗಳನ್ನು ಬೆರಗುಗೊಳಿಸಿದ್ದು ಮಾತ್ರವಲ್ಲದೇ, ಜಾಗತಿಕವಾಗಿ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದ ಕದ್ರಿ ಗೋಪಾಲನಾಥರು ನೈಜ ನಾದಯೋಗಿ ಎಂದು ಹಿರಿಯ ಸಂಗೀತಜ್ಞ ಪ್ರೊ.ಅರವಿಂದ ಹೆಬ್ಬಾರ್ ಹೇಳಿದ್ದಾರೆ.

ರಾಗಧನ ಉಡುಪಿ ಇದರ ವತಿಯಿಂದ ಗುರುವಾರ ನಡೆದ ವಿದ್ವಾನ್ ಕದ್ರಿ ಗೋಪಾಲ್ನಾಥ್ ನುಡಿನಮನ ಕಾರ್ಯಕ್ರಮದಲ್ಲಿ ಪ್ರೊ.ಹೆಬ್ಬಾರ್,ಕದ್ರಿ ಅವರ ಕಲಾ ಬದುಕು ಹಾಗೂ ಸಿದ್ಧಿ ಸಾಧನೆಯ ಬಗೆಗೆ ಸ್ಥೂಲವಾಗಿ ಮಾತನಾಡಿ ನುಡಿನಮನ ಅರ್ಪಿಸಿದರು.

ಬಿಬಿಸಿಯಲ್ಲಿ ಸಂಗೀತ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿದ ಬಳಿಕ, ವಿಶ್ವ ಕಲಾಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಿದ ಕದ್ರಿ ಗೋಪಾಲನಾಥ್, ವರ್ಣರಂಜಿತ ಉತ್ಸಾಹಿ ಹಾಗೂ ಮಾನವೀಯ ವ್ಯಕ್ತಿತ್ವದ ಮೂಲಕವೂ ಅನನ್ಯತೆಯನ್ನು ಸಾಧಿಸಿದ ಅಪೂರ್ವ ಕಲಾವಿದ ಎಂದು ಹೆಬ್ಬಾರ್ ವಿವರಿದರು.

ಕಲಾಚಿಂತಕಿ ವಿದುಷಿ ಪ್ರತಿಭಾ ಸಾಮಗ, ಸರೋಜಾ ಆಚಾರ್ಯ, ರಾಘವೇಂದ್ರ ಆಚಾರ್ಯ, ವಸಂತಲಕ್ಷ್ಮೀ ಹೆಬ್ಬಾರ್, ವಾಸುದೇವ ಭಟ್ ಪೆರಂಪಳ್ಳಿ, ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ ಮೊದಲಾದವರು ಕದ್ರಿಯವರ ಅಪಾರ ಸಂಗೀತ ಸಾಧನೆ ಹಾಗೂ ಸಹಕಲಾವಿದರು ಮತ್ತು ಅಭಿಮಾನಿಗಳ ಬಗ್ಗೆ ಅವರಿಗಿದ್ದ ಆದರ, ಆತ್ಮೀಯತೆಯನ್ನು ಸ್ಮರಿಸಿಕೊಂಡರು.

ಕದ್ರಿಯವರಿಂದಾಗಿ ಕರಾವಳಿ ಜಿಲ್ಲೆಗಳೂ ಸೇರಿದಂತೆ ನಾಡಿನಲ್ಲಿ ನೂರಾರು ಮಂದಿ ಸ್ಯಾಕ್ಸೋಫೋನ್‌ನಿಂದಲೇ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿರುವ ಬ್ಗೆ ಬಣ್ಣಿಸಿ ನುಡಿನಮನ ಸಲ್ಲಿಸಿದರು.

ರಾಗಧನ ಸಂಸ್ಥೆಯ ಅಧ್ಯಕ್ಷ ಡಾ.ಕಿರಣ್ ಹೆಬ್ಬಾರ್ ಪ್ರಸ್ತಾವನೆಯ ನುಡಿ ಯೊಂದಿಗೆ ನುಡಿನಮನ ಸಲ್ಲಿಸಿ ಸ್ವಾಗತಿಸಿದರು. ಕಾರ್ಯದರ್ಶಿ ಉಮಾ ಉದಯ್ಶಂಕರ್, ಶಂಕರನಾರಾಯಣ್ ಕಾರ್ಯಕ್ರಮ ಸಂಯೋಜಿಸಿದರು. ಕದ್ರಿ ಗೋಪಾಲನಾಥರ ದಿವ್ಯಾತ್ಮಕ್ಕೆ ಸದ್ಗತಿಗಾಗಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News