ಹೆಬ್ರಿ ಸರಕಾರಿ ಕಾಲೇಜು ಆವರಣದಲ್ಲೇ ಮಿನಿ ವಿಧಾನಸೌಧ ನಿರ್ಮಾಣ

Update: 2019-10-18 14:29 GMT

ಉಡುಪಿ, ಅ.18: ಹೆಬ್ರಿಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪಕ್ಕದಲ್ಲೇ, ಕಾಲೇಜಿಗೆ ಸೇರಿದ ಜಾಗದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಮುಂದಾಗಿರುವ ಕ್ರಮವನ್ನು ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ವಿರೋಧಿಸಿದ್ದು, ಕಾಮಗಾರಿ ಪ್ರಾರಂಭಿಸಿದರೆ ತೀವ್ರ ಹೋರಾಟದ ಎಚ್ಚರಿಕೆ ಯನ್ನು ನೀಡಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾಲೇಜಿನ ವಿದ್ಯಾರ್ಥಿ ಸಂಘದ ನಾಯಕ ಸುಮಂತ್ ಶೆಟ್ಟಿ ಹಾಗೂ ಗ್ರಾಮಸ್ಥರ ಪರವಾಗಿ ಶ್ರೀಧರ ಶೆಟ್ಟಿ ಚಾರ, ಕಾಲೇಜಿಗೆ ಸೇರಿದ ಜಾಗದಲ್ಲಿ ಕಾಲೇಜಿನ ಎದುರಿನಲ್ಲೇ ಮಿನಿ ವಿಧಾನಸೌಧ ಬಂದರೆ, ಇಲ್ಲಿನ ಶೈಕ್ಷಣಿಕ ವಾತಾವರಣವೇ ಕಲುಷಿತಗೊಳ್ಳುವ ಭೀತಿಯನ್ನು ವ್ಯಕ್ತಪಡಿಸಿದರು.

ಇದೀಗ ತಾಲೂಕು ಕೇಂದ್ರವಾಗಿ ಘೋಷಿತವಾಗಿರುವ ಹೆಬ್ರಿಯಲ್ಲಿ 32 ಎಕರೆ ಜಾಗದಲ್ಲಿ ಸರಕಾರಿ ಪ್ರಥಮ ದರ್ಜೆ ಪ್ರಾರಂಭಗೊಂಡಿದ್ದು, ಇದೀಗ ಜಮೀನಿನ ಅತಿಕ್ರಮಣದ ಬಳಿಕ 25.12 ಎಕರೆ ಜಾಗ ಕಾಲೇಜಿನ ಹೆಸರಿನಲ್ಲಿದ್ದು, ಸ್ವಂತ ಕಟ್ಟಡವನ್ನು ಹೊಂದಿದೆ ಎಂದರು.

ಆದರೆ, ಇತ್ತೀಚೆಗೆ ಕಾಲೇಜಿಗೆ ಮಂಜೂರಾದ 25.12 ಎಕರೆ ಜಮೀನಿನ ಪೈಕಿ ಒಟ್ಟು ಐದು ಎಕರೆ ಖಾಲಿ ಜಾಗವನ್ನು ವಿದ್ಯಾ ಇಲಾಖೆಯಿಂದ ಹಿಂಪಡೆದು, ಹೆಬ್ರಿ ತಾಲೂಕು ಮಿನಿ ವಿಧಾನಸೌಧ ಕಾಮಗಾರಿಗೆ ಕಾಯ್ದಿರಿಸಿ ಜಿಲ್ಲಾಧಿಕಾರಿಯವರು ಆದೇಶಿಸಿದ್ದಾರೆ. ಎರಡು ದಿನಗಳ ಹಿಂದೆ ಜಾಗವನ್ನು ಸಮತಟ್ಟುಗೊಳಿಸುವ ಪ್ರಯತ್ನವೂ ನಡೆದಿದೆ ಎಂದು ಸುಮಂತ್ ತಿಳಿಸಿದರು.

ಹೆಬ್ರಿ ತಾಲೂಕಾಗಿ ಘೋಷಣೆಯಾಗಿರುವುದರಿಂದ, ಕಾಲೇಜು ಅಭಿವೃದ್ಧಿ ಹೊಂದುವ ಎಲ್ಲಾ ಸಾಧ್ಯತೆಗಳಿವೆ. ಹೆಬ್ರಿ ತಾಲೂಕಿನಲ್ಲಿರುವ ಏಕೈಕ ಕಾಲೇಜು ಇದಾಗಿದ್ದು, ಇದಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಪ್ರತಿ ವರ್ಷ ಹೆಚ್ಚಾಗುತ್ತಿದೆ. ಈ ವರ್ಷ 85 ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದು, ಒಟ್ಟು 485 ವಿದ್ಯಾರ್ಥಿಗಳು ಕಲಿಯುತಿದ್ದಾರೆ ಎಂದು ವಿವರಿಸಿದರು.

ಈಗಾಗಲೇ ಕಾಲೇಜಿನಲ್ಲಿ ಬಿಬಿಎಂ ತರಗತಿ ಪ್ರಾರಂಭ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಕಾಲೇಜಿನ ಅಭಿವೃದ್ಧಿಗೆ, ಉನ್ನತ ಶಿಕ್ಷಣ ಕೇಂದ್ರ ಗಳ ನಿರ್ಮಾಣಕ್ಕೆ ಜಾಗದ ಅಗತ್ಯವಿರುತ್ತದೆ. ಹೆಬ್ರಿಯಲ್ಲಿ ಯಾವುದೇ ವೃತ್ತಿಪರ ಕಾಲೇಜುಗಳಿಲ್ಲದ ಕಾರಣ, ಮುಂದೆ ಇಂಜಿನಿಯರಿಂಗ್ ಕಾಲೇಜನ್ನು ಪ್ರಾರಂಭಿಸಲು ಇಲ್ಲಿ ಅವಕಾಶವಿದೆ ಎಂದರು.

ಕಾಲೇಜು ಅಭಿವೃದ್ಧಿ ಸಮಿತಿ ಈಗಾಗಲೇ ತನ್ನ ಸಭೆಯಲ್ಲಿ ಕಾಲೇಜಿಗೆ ಮೂಲಭೂತ ಸೌಲಭ್ಯಗಳಾದ ಪ್ರತ್ಯೇಕ ಗ್ರಂಥಾಲಯ ಕಟ್ಟಡ, 400ಮೀ. ಓಟದ ಕ್ರೀಡಾಂಗಣ ವಿಸ್ತರಣೆ, ಒಳಾಂಗಣ ಕ್ರೀಡಾಂಗಣ ವ್ಯವಸ್ಥೆ, ಜಿಮ್ ವ್ಯವಸ್ಥೆ, ಪುರುಷರ ಮತ್ತು ಮಹಿಳೆಯರ ವಿದ್ಯಾರ್ಥಿ ನಿಲಯ, ಕಾವಲುಗಾರರಿಗೆ ವಸತಿ ನಿಲಯ ಮುಂತಾದ ಕಾಮಗಾರಿ ನಡೆಯಬೇಕಾ ಗಿರುವ ಕಾರಣ ಈಗಿರುವ ಜಾಗ ಕಾಲೇಜಿಗೆ ಅಗತ್ಯವಾಗಿರುತ್ತದೆ ಎಂದು ಶ್ರೀಧರ ಶೆಟ್ಟಿ ನುಡಿದರು.

ಕಾಲೇಜಿನ ಪಕ್ಕದಲ್ಲೇ ತಾಲೂಕಿನ 28ಕ್ಕೂ ಅಧಿಕ ಇಲಾಖೆಗಳು ಕಾರ್ಯಾಚರಿಸುವ ಮಿನಿವಿಧಾನಸೌಧ ತಲೆ ಎತ್ತಿದರೆ ಇದರಿಂದ, ಇಲ್ಲಿನ ಶೈಕ್ಷಣಿಕ ವಾತಾವರಣವೇ ಕಲುಷಿತಗೊಳ್ಳಲಿದೆ. ಮಿನಿ ವಿಧಾನಸೌಧಕ್ಕಾಗಿ ಕುಂದಾಪುರದ ಹಿಂದಿನ ಉಪವಿಭಾಗಾಧಿಕಾರಿಯವರು ಸಮೀಪದಲ್ಲಿ 11:35 ಎಕರೆ ಜಾಗ ವನ್ನು ಗುರುತಿಸಿದ್ದು, ಅದರಲ್ಲಿ ನಿರ್ಮಿಸುವಂತೆ ನಾವು ಒತ್ತಾಯಿಸುತ್ತೇವೆ. ಅಥವಾ ಈಗ ಬಸ್ ನಿಲ್ದಾಣದ ಪಕ್ಕದಲ್ಲೇ ಇರುವ ಈಗ ತಾಲೂಕು ಕಚೇರಿ ಕಾರ್ಯಾಚರಿಸುತ್ತಿರುವ ಸಮುದಾಯ ಆರೋಗ್ಯ ಕೇಂದ್ರವಿದ್ದ ಎರಡು ಎಕರೆ ಜಾಗದಲ್ಲೇ ಮಿನಿ ವಿಧಾನಸೌಧ ನಿರ್ಮಿಸುವಂತೆ ಅವರು ಒತ್ತಾಯಿಸಿದರು.

ಈ ಬಗ್ಗೆ ಎರಡು ದಿನಗಳ ಹಿಂದೆ ಹೆಬ್ರಿಗೆ ಬಂದ ಶಾಸಕ ಸುನಿಲ್ ಕುಮಾರ್ ಅವರಿಗೆ ಮನವಿ ಸಲ್ಲಿಸಿ, ವಿಷಯವನ್ನು ಮನದಟ್ಟು ಮಾಡಿದ್ದೇವೆ. ಈ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ಅವರ ಮೇಲೆ ನಮಗೆ ಭರವಸೆ ಇದೆ ಎಂದು ಸುಮಂತ್ ಶೆಟ್ಟಿ ತಿಳಿಸಿದರು.

ಕಾಲೇಜಿಗೆ ಸೇರಿದ ಐದು ಎಕರೆ ಜಾಗದಲ್ಲಿ ಮಿನಿ ವಿಧಾನಸೌಧ ನಿರ್ಮಾಣದ ಪ್ರಸ್ತಾಪಕ್ಕೆ ಶಾಸಕರ ನೇತೃತ್ವದ ಕಾಲೇಜಿನ ಅಭಿವೃದ್ಧಿ ಸಮಿತಿ ವಿರೋಧ ವ್ಯಕ್ತಪಡಿಸಿ ನಿರ್ಣಯ ತೆಗೆದುಕೊಂಡಿದೆ. ಕಾಲೇಜಿಗೆ ಸೇರಿದ ಜಾಗವನ್ನು ಬಿಟ್ಟು ಬೇರೆ ಎಲ್ಲೇ ಆದರೂ ಮಿನಿ ವಿಧಾನಸೌಧ ನಿರ್ಮಾಣ ಮಾಡುವುದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಸುಮಂತ್ ಮತ್ತು ಶ್ರೀಧರ ಶೆಟ್ಟಿ ನುಡಿದರು.

ಈ ಬಗ್ಗೆ ಜಿಲ್ಲಾಧಿಕಾರಿಯವರಿಗೂ ನಾವು ಮನವಿ ಸಲ್ಲಿಸಿದ್ದೇವೆ. ನಮ್ಮೆಲ್ಲಾ ಮನವಿ, ಬೇಡಿಕೆಗಳನ್ನು ಮೀರಿ ಮತ್ತೆ ಕಾಲೇಜಿನ ಆವರಣದೊಳಗೆ ಕಾಲೇಜಿಗೆ ಸೇರಿದ ಜಾಗದಲ್ಲಿ ಕಾಮಗಾರಿಗೆ ಮುಂದಾದರೆ, ವಿದ್ಯಾರ್ಥಿಗಳ ಹಿತದೃಷ್ಟಿಯಲ್ಲಿಟ್ಟುಕೊಂಡು ನಾವು ತೀವ್ರ ಹೋರಾಟ ನಡೆಸುತ್ತೇವೆ ಎಂದು ಸುಮಂತ್ ಹಾಗೂ ಇತರ ವಿದ್ಯಾರ್ಥಿಗಳು ತಿಳಿಸಿದರು. ನಾವು ಯಾವುದೇ ಪಕ್ಷ ರಾಜಕೀಯದಲ್ಲಿಲ್ಲ, ಕಾಲೇಜಿನ ಜಾಗವನ್ನು ಉಳಿಸುವುದಷ್ಟೇ ನಮ್ಮ ಹೋರಾಟದ ಗುರಿ ಎಂದವರು ನುಡಿದರು.

ಕಾಲೇಜಿನ ವಿದ್ಯಾರ್ಥಿಗಳಾದ ಶಿವರಾಜ್ ಶೆಟ್ಟಿ, ಹೇಮಂತ್ ಶೆಟ್ಟಿ, ಅಕ್ಷಯ್ ನಾಯ್ಕಿ, ವಿಜಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News