ರವಿದಾಸ ಮಂದಿರವಿದ್ದ ಸ್ಥಳವನ್ನು ಗುರು ರವಿದಾಸರ ಭಕ್ತರಿಗೆ ನೀಡಲು ಸಿದ್ಧ: ಕೇಂದ್ರ ಸರಕಾರ

Update: 2019-10-18 15:57 GMT

ಹೊಸದಿಲ್ಲಿ, ಅ.18: ದಕ್ಷಿಣ ದಿಲ್ಲಿಯಲ್ಲಿ ಕೆಲ ತಿಂಗಳ ಹಿಂದೆ ನೆಲಸಮಗೊಳಿಸಿದ ರವಿದಾಸ ಮಂದಿರದ ಸ್ಥಳವನ್ನು ರವಿದಾಸರ ಭಕ್ತರಿಗೆ ನೀಡಲು ಒಪ್ಪಿಗೆಯಿದೆ ಎಂದು ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ಹೊಸ ಮಂದಿರ ನಿರ್ಮಿಸಲು 200 ಚದರ ಮೀಟರ್ ಪ್ರದೇಶವನ್ನು ರವಿದಾಸರ ಭಕ್ತರ ಸಮಿತಿಗೆ ಹಸ್ತಾಂತರಿಸಲು ಕೇಂದ್ರ ಸರಕಾರ ಸಿದ್ಧವಿದೆ. ಶಾಂತಿ ಮತ್ತು ಸೌಹಾರ್ದತೆ ನೆಲೆಸುವಂತಾಗಲು ಈ ನಿರ್ಧಾರಕ್ಕೆ ಬಂದಿರುವುದಾಗಿ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಸುಪ್ರೀಂಕೋರ್ಟ್‌ನಲ್ಲಿ ಹೇಳಿಕೆ ನೀಡಿದ್ದಾರೆ. ಮಂದಿರ ನೆಲಸಮ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ ಸಲ್ಲಿಸಿರುವ 7 ಅರ್ಜಿದಾರರಲ್ಲಿ ಐವರು ಕೇಂದ್ರ ಸರಕಾರದ ಪ್ರಸ್ತಾಪವನ್ನು ಒಪ್ಪಿದ್ದಾರೆ. ಉಳಿದ ಇಬ್ಬರು ಕೂಡಾ ಒಪ್ಪಬಹುದು ಎಂದು ವೇಣುಗೋಪಾಲ್ ತಿಳಿಸಿದರು.

ಈ ಪ್ರಸ್ತಾಪಕ್ಕೆ ಆಕ್ಷೇಪಣೆ ಏನಾದರೂ ಇದೆಯೇ ಎಂದು ಪರಿಶೀಲಿಸಿದ ಬಳಿಕ ಆದೇಶ ಹೊರಡಿಸುವುದಾಗಿ ತಿಳಿಸಿದ ಸುಪ್ರೀಂಕೋರ್ಟ್, ಕೇಂದ್ರ ಸರಕಾರದ ಪ್ರಸ್ತಾವನೆಯನ್ನು ದಾಖಲಿಸಿಕೊಂಡು, ಪ್ರಕರಣವನ್ನು ಸೋಮವಾರದ ಕಲಾಪಕ್ಕೆ ಲಿಸ್ಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News