ದರೋಡೆಗೆ ಸಂಚು ರೂಪಿಸಿದ ಪ್ರಕರಣ: ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ

Update: 2019-10-18 16:39 GMT

ಮಂಗಳೂರು, ಅ.18: ಕೇಂದ್ರ ಸರಕಾರದ ತನಿಖಾ ಸಂಸ್ಥೆ ಹೆಸರು ಬಳಸಿ ದರೋಡೆಗೆ ಸಂಚು ರೂಪಿಸಿದ ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್‌ನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಮೂಲತಃ ಕೇರಳ ಕೋಯಿಲಾಡ್ ಕಾವನಡ, ಪ್ರಸ್ತುತ ಮಣಿಪಾಲ ನಿವಾಸಿ ಟಿ.ಸ್ಯಾಮ್ ಪೀಟರ್ (53), ಮೂಲತಃ ಮಡಿಕೇರಿ ಸಿದ್ಧಾಪುರ ಅರೇಕಳ, ಪ್ರಸ್ತುತ ಬೆಂಗಳೂರು ಯಲಹಂಕ ನೆಹರು ನಗರ ನಿವಾಸಿ ಟಿ.ಕೆ. ಬೋಪಣ್ಣ (33), ಬೆಂಗಳೂರು ದಕ್ಷಿಣ ನಾರ್ಥ್ ಸ್ಟ್ರೀಟ್ ನೀಲಸಂದ್ರ ನಿವಾಸಿ ಮದನ್ (41), ಮೂಲತಃ ವೀರಾಜಪೇಟೆ ಕಾಕೂಟುಪುರಂ ನಾಲ್ಕೇರಿ ನಿವಾಸಿ ಚಿನ್ನಪ್ಪ (38), ಬೆಂಗಳೂರು ಕನಕಪುರ ಪಿಳ್ಳಿಕಾಮ ನಿವಾಸಿ ಸುನೀಲ್‌ ರಾಜು (35), ಬೆಂಗಳೂರು ಗೌಡನಪಾಳ್ಯ ನಿವಾಸಿ ಕೋದಂಡರಾಮ (39), ಕುಳೂರು ನಿವಾಸಿ ಮೊಯಿದ್ದೀನ್ ಯಾನೆ ಚೆರಿಯನ್ (70), ಫಳ್ನೀರು ನಿವಾಸಿ ಎಸ್‌ಎಕೆ ಅಬ್ದುಲ್ ಲತೀಫ್ (59) ಸೇರಿದಂತೆ ಇನ್ನಿತರರನ್ನು ಬಂಧಿಸಲಾಗಿತ್ತು.

ಆರೋಪಿಗಳಿಂದ ಎರಡು ಕಾರು, ಒಂದು ಪಿಸ್ತೂಲು, ಎರಡು ರಿವಾಲ್ವರ್, ಎಂಟು ಜೀವಂತ ಗುಂಡುಗಳು, 10 ಮೊಬೈಲ್, ವೈಸ್ ರೆಕಾರ್ಡರ್, ಲ್ಯಾಪ್‌ಟಾಪ್ ಸಹಿತ 20ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಆರೋಪಿಗಳ ತಂಡ ಗೌಡ ಸಾರಸ್ವತ ಸಮಾಜದ ಪ್ರತಿಷ್ಠಿತ ವ್ಯಕ್ತಿಗಳ ಹತ್ಯೆಗೆ ಅಥವಾ ಅಪಹರಣಕ್ಕೆ ಸಂಚು ರೂಪಿಸಿದ್ದಾನೆ ಎಂಬ ಮಾಹಿತಿಗಳ ಹಿನ್ನೆಲೆಯಲ್ಲಿ ಪೋಲಿಸರು ತನಿಖೆ ನಡೆಸಿ, ಚಾರ್ಜ್‌ಶೀಟ್ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಜಿಎಸ್‌ಬಿ ಸಮಾಜದ ಇಬ್ಬರು ಸ್ವಾಮೀಜಿಗಳ ನಡುವೆ ತಲೆದೋರಿರುವ ವಿವಾದವನ್ನು ಬಗೆಹರಿಸಿಕೊಡಲು ಆರೋಪಿ ಸ್ಯಾಮ್ ಪೀಟರ್ ಕ್ರಿಮಿನಲ್ ಸಂಚು ರೂಪಿಸಿದ್ದ ಎಂಬುದು ಪೊಲೀಸ್ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

ಉಡುಪಿಯ ರೆಸಿಡೆನ್ಸಿಯೊಂದರ ಮಾಲಕನ ಮೂಲಕ ಜಿಎಸ್‌ಬಿ ಪರಿತ್ಯಕ್ತ ಸ್ವಾಮೀಜಿಯೊಬ್ಬರನ್ನು ಸಂಪರ್ಕಿಸಿದ್ದ ಸ್ಯಾಮ್ ಪೀಟರ್ ಮಠದ ಆಸ್ತಿ ವಿವಾದವನ್ನು ಬಗೆಹರಿಸಿಕೊಡಲು 15 ಲಕ್ಷ ರೂ. ಮುಂಗಡ ಹಣ ಪಡೆದಿದ್ದ ಎಂದು ತಿಳಿದುಬಂದಿದೆ.

ಈ ಬಗ್ಗೆ ತನಿಖೆಗೆ ನಡೆಸಿದ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News