ಮಂಗಳೂರು: ಬ್ಯಾಂಕ್ ವಿಲೀನ ವಿರೋಧಿಸಿ ಮೊಂಬತ್ತಿ ಮೆರವಣಿಗೆ

Update: 2019-10-18 17:06 GMT

ಮಂಗಳೂರು, ಅ.18: ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ(ಜೆಸಿಟಿಯು), ಬ್ಯಾಂಕ್ ನೌಕರರ-ಅಧಿಕಾರಿಗಳ ಸಂಘಟನೆಗಳ ಜಂಟಿ ವೇದಿಕೆ (ಯುಎಫ್‌ಬಿಯು) ವತಿಯಿಂದ ಬ್ಯಾಂಕ್‌ಗಳ ವಿಲೀನಿಕರಣದ ವಿರುದ್ಧ ನಗರದ ಪುರಭವನದಿಂದ ಪಾಂಡೇಶ್ವರದ ಕಾರ್ಪೊರೇಷನ್ ಬ್ಯಾಂಕಿನ ಪ್ರಧಾನ ಕಚೇರಿವರೆಗೆ ಮೊಂಬತ್ತಿ ಮೆರವಣಿಗೆ ನಡೆಯಿತು.

ಪುರಭವನದಲ್ಲಿ ಮೊಂಬತ್ತಿ ಮೆರವಣಿಗೆಗೆ ಕಾರ್ಪೊರೇಶನ್ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಟಿ.ಆರ್.ಭಟ್ ಹಾಗೂ ಪ್ರಗತಿಪರ ಚಿಂತಕ ಶ್ರೀನಿವಾಸ ಕಕ್ಕಿಲಾಯ ಚಾಲನೆ ನೀಡಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಶ್ರೀನಿವಾಸ ಕಕ್ಕಿಲಾಯ, ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಆಡಳಿತದಿಂದಾಗಿ ದೇಶದ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಕೇಂದ್ರದ ನೀತಿಯಿಂದ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ನಲುಗಿ ಹೋಗಿವೆ. ಬಿಜೆಪಿ ಸರಕಾರವನ್ನು ಕಿತ್ತೊಗೆಯುವವರೆಗೂ ಈ ಮೊಂಬತ್ತಿ ಮೆರವಣಿಗೆ ಮುಂದುವರಿಯಲಿದೆ ಎಂದರು.

ನಗರದ ಪುರಭವನದಿಂದ ಆರಂಭವಾದ ಮೆರವಣಿಗೆಯು ಕ್ಲಾಕ್ ಟವರ್-ಆರ್‌ಟಿಒ ಕಚೇರಿ-ಎ.ಬಿ.ಶೆಟ್ಟಿ ಸರ್ಕಲ್ ಮಾರ್ಗವಾಗಿ ಪಾಂಡೇಶ್ವರದ ಕಾರ್ಪೊರೇಷನ್ ಬ್ಯಾಂಕ್ ಎದುರು ಪ್ರತಿಭಟನಾಕಾರರು ಸಮಾವೇಶಗೊಂಡರು.

ಬಳಿಕ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಕಾರ್ಪೊರೇಶನ್ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್ ಶೆಟ್ಟಿ, ಅವಿಭಜಿತ ದ.ಕ. ಜಿಲ್ಲೆ ಐದು ಬ್ಯಾಂಕ್‌ಗಳಿಗೆ ಜನ್ಮ ನೀಡಿದ ಬ್ಯಾಂಕಿಂಗ್ ಕ್ಷೇತ್ರದ ತೊಟ್ಟಿಲು. ಇವುಗಳಲ್ಲಿ ನಾಲ್ಕು ಬ್ಯಾಂಕ್‌ಗಳು ಸಾರ್ವಜನಿಕ ರಂಗದ ಅಗ್ರಗಣ್ಯ ಬ್ಯಾಂಕ್‌ಗಳಾಗಿವೆ. ಕೇಂದ್ರ ಸರ್ಕಾರ ಕಳೆದ ವರ್ಷ ವಿಜಯಾ ಬ್ಯಾಂಕ್‌ನ್ನು ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಗೊಳಿಸಿ ದ.ಕ. ಜಿಲ್ಲೆಯಲ್ಲಿ ಹುಟ್ಟಿದ ಬ್ಯಾಂಕಿನ ನಾಮಾವಶೇಷ ಮಾಡಿತು. ಇದು ಜಿಲ್ಲೆಯ ಪ್ರತಿಷ್ಠೆಗೆ ಮೊದಲ ಗದಾಪ್ರಹಾರವಾಗಿದೆ. ಈಗ ಕಾರ್ಪೊರೇಶನ್ ಬ್ಯಾಂಕ್‌ಗೂ ಅದೇ ಸ್ಥಿತಿ ಬರಲಿದೆ ಎಂದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಕೇಂದ್ರ ಸರಕಾರದ ಜನ್‌ಧನ್ ಯೋಜನೆ, ಪ್ರಧಾನ ಮಂತ್ರಿ ವಿಮಾ ಯೋಜನೆ, ಕೃಷಿಕರ ವಿಮಾ ಯೋಜನೆಯಂತಹ ಜನಪ್ರಿಯ ಯೋಜನೆಗಳ ಅನುಷ್ಠಾನಕ್ಕೆ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಅವಲಂಬಿಸಿದೆ. ಹೀಗಿರುವಾಗ ಬ್ಯಾಂಕ್‌ಗಳ ವಿಲೀನಿಕರಣಕ್ಕೆ ಮುಂದಾಗಿರುವುದು ಸರಿಯಲ್ಲ. ವಿಲೀನಿಕರಣ ಪ್ರಕ್ರಿಯೆ ಆದೇಶವನ್ನು ವಾಪಸ್ ಪಡೆಯಬೇಕು. ತಪ್ಪಿದಲ್ಲಿ ಪ್ರಬಲ ಜನಾಂದೋಲನ ರೂಪಿಸುವುದಾಗಿ ಎಚ್ಚರಿಕೆ ನೀಡಿದರು.

ಬ್ಯಾಂಕ್ ನೌಕರರ ಮುಖ್ಯಸ್ಥ ಅಜಯ್ ಮಾಂಜಳೇಕರ್ ಮಾತನಾಡಿ, ದ.ಕ. ಜಿಲ್ಲೆಯಲ್ಲಿ ಹುಟ್ಟಿದ ಈ ಎರಡು ಬ್ಯಾಂಕ್‌ಗಳು ವಿಲೀನಿಕರಣದಿಂದ ಸದ್ಯದಲ್ಲೇ ತಮ್ಮ ಅಸ್ತಿತ್ವ ಕಳೆದುಕೊಳ್ಳಲಿದೆ. ಇದರಿಂದಾಗಿ ಅನೇಕ ಬ್ಯಾಂಕ್ ಶಾಖೆಗಳನ್ನು ಮುಚ್ಚಿ ಹಾಕುವ ಭೀತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮೊಂಬತ್ತಿ ಮೆರವಣಿಗೆ ಹಾಗೂ ಪ್ರತಿಭಟನಾ ಸಭೆಗೆ ಕೇಂದ್ರ ಕಾರ್ಮಿಕ ಸಂಘಟನೆಗಳಾದ ಎಐಟಿಸಿಯು, ಸಿಐಟಿಯು, ಐಎನ್‌ಟಿಯುಸಿ, ಎಚ್‌ಎಂಎಸ್ ಬ್ಯಾಂಕ್ ನೌಕರರ ಅಧಿಕಾರಿಗಳ ಸಂಘಟನೆಗಳಾದ ಎಐಬಿಇಎ, ಎಐಬಿಒಸಿ, ಎಐಬಿಒಎ, ಎನ್‌ಒಬಿಡಬ್ಲ್ಯೂ, ಎನ್‌ಒಬಿಒ, ಬಿಇಎಫ್‌ಐ, ನಿವೃತ್ತ ಬ್ಯಾಂಕ್ ನೌಕರರ ಸಂಘಟನೆಗಳು, ಇತರ ಸಂಘಟನೆಗಳಾದ ಬಿಎಸ್‌ಎನ್‌ಎಲ್‌ಇಯು, ವಿಮಾ ನೌಕರರ ಸಂಘ, ಅಂಚೆ ನೌಕರರ ಸಂಘ, ವಿದ್ಯಾರ್ಥಿ ಯುವಜನ ಸಂಘಟನೆಗಳಾದ ಎಐಎಸ್‌ಎಫ್, ಎಸ್‌ಎಫ್‌ಐ, ಡಿವೈಎಫ್‌ಐ, ಎಐವೈಎಫ್, ದಲಿತ ಸಂಘರ್ಷ ಸಮಿತಿ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದವು.

ಮೆರವಣಿಗೆಯಲ್ಲಿ ಜಂಟಿ ವೇದಿಕೆ ಜಿಲ್ಲಾ ಮುಖಂಡರಾದ ಎಚ್.ವಿ.ರಾವ್, ಹಾಜಿ ಅಬ್ದುಲ್ಲಾ ಟ್ರಸ್ಟ್‌ನ ಇಕ್ಬಾಲ್ ಮನ್ನಾ, ವಿವಿಧ ಸಂಘಟನೆಗಳ ಮನೋಹರ ಶೆಟ್ಟಿ, ವಿ.ಕುಕ್ಯಾನ್, ದೇವದಾಸ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News