ಇತಿಹಾಸದಲ್ಲೇ ಪ್ರಪ್ರಥಮ ಬಾರಿ ಬಾಹ್ಯಾಕಾಶದಲ್ಲಿ ಮಹಿಳೆಯರ ನಡಿಗೆ

Update: 2019-10-18 17:51 GMT

ವಾಶಿಂಗ್ಟನ್, ಅ. 18: ಅಮೆರಿಕದ ಗಗನಯಾನಿಗಳಾದ ಕ್ರಿಸ್ಟೀನಾ ಕಾಚ್ ಮತ್ತು ಜೆಸ್ಸಿಕಾ ಮೆಯರ್ ಶುಕ್ರವಾರ ಬಾಹ್ಯಾಕಾಶ ನಡಿಗೆ ನಿರ್ವಹಿಸಿದ ಮೊದಲ ಸರ್ವ-ಮಹಿಳಾ ತಂಡವೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಪವರ್ ಕಂಟ್ರೋಲರೊಂದನ್ನು ಬದಲಾಯಿಸಲು ಅವರು ಭಾರತೀಯ ಕಾಲಮಾನ ಶುಕ್ರವಾರ ಸಂಜೆ 5:08 (11:38 ಜಿಎಂಟಿ)ಕ್ಕೆ ಬಾಹ್ಯಾಕಾಶ ನಿಲ್ದಾಣದ ಹೊರಗೆ ಕಾಲಿಟ್ಟರು.

ಇದಕ್ಕಿಂತ ಕೆಲವು ನಿಮಿಷಗಳ ಮೊದಲು ವರದಿಗಾರರಿಗೆ ಕರೆ ಮಾಡಿದ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಆಡಳಿತಾಧಿಕಾರಿ ಜಿಮ್ ಬ್ರೈಡನ್‌ಸ್ಟೈನ್, ಈ ಘಟನೆಯ ಮಹತ್ವವನ್ನು ವಿವರಿಸಿದರು.

‘‘ಬಾಹ್ಯಾಕಾಶವು ಎಲ್ಲ ಜನರಿಗೂ ಲಭ್ಯವಿದೆ ಎನ್ನುವ ಸಂದೇಶವನ್ನು ನೀಡಲು ನಾವು ಬಯಸಿದ್ದೇವೆ. ಈ ವಿಕಾಸದ ಹಾದಿಯಲ್ಲಿ ಇದು ಇನ್ನೊಂದು ಮೈಲಿಗಲ್ಲಾಗಿದೆ’’ ಎಂದು ಅವರು ಹೇಳಿದರು.

ಮಾರ್ಚ್‌ನಲ್ಲಿ ಸಾಧ್ಯವಾಗದ ಸಾಧನೆ

ಸರ್ವ ಮಹಿಳಾ ತಂಡದ ಬಾಹ್ಯಾಕಾಶ ನಡಿಗೆಯು ಮಾರ್ಚ್‌ನಲ್ಲೇ ನಡೆಯಬೇಕಾಗಿತ್ತು. ಆದರೆ ನಾಸಾದ ಬಳಿ ಆಗ ಮಹಿಳೆಯರು ಬಳಸುವ ಒಂದೇ ಮಧ್ಯಮ ಗಾತ್ರದ ಬಾಹ್ಯಾಕಾಶ ತೊಡುಗೆಯಿತ್ತು. ಬಳಿಕ, ಪುರುಷ ಮತ್ತು ಮಹಿಳಾ ಗಗನಯಾನಿಗಳ ಜೋಡಿ ಆ ಬಾಹ್ಯಾಕಾಶ ನಡಿಗೆಯನ್ನು ನಿಭಾಯಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News