ಮತದಾರರಿಗೆ ಹಣ ಹಂಚುತ್ತಿದ್ದ ಬಿಜೆಪಿ ಸಚಿವನ ಸಂಬಂಧಿ: 17.75 ಲಕ್ಷ ರೂ. ವಶ

Update: 2019-10-19 15:36 GMT
ಸಾಂದರ್ಭಿಕ ಚಿತ್ರ

ನಾಗ್ಪುರ(ಮಹಾರಾಷ್ಟ್ರ),ಅ.19: ಸಾಕೋಲಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಭಂಡಾರಾ ಜಿಲ್ಲಾ ಉಸ್ತುವಾರಿ ಸಚಿವ ಪರಿಣಯ್ ಫುಕೆ ಅವರ ಸಂಬಂಧಿಯೋರ್ವನಿಂದ 17.75 ಲ.ರೂ.ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮತದಾನ ಅ.21ರಂದು ನಡೆಯಲಿದೆ.

ಶುಕ್ರವಾರ ರಾತ್ರಿ ಸಚಿವರ ಸಂಬಂಧಿ ನಿತಿನ್ ನೀಲಕಂಠರಾವ ಫುಕೆ ಬಳಿಯಿಂದ 17,74,600 ರೂ.ಗಳನ್ನು ವಶಪಡಿಸಿಕೊಂಡಿದ್ದನ್ನು ದೃಢಪಡಿಸಿದ ನಾಗ್ಪುರ ವಲಯದ ಐಜಿಪಿ ಮಲ್ಲಿಕಾರ್ಜುನ ಪ್ರಸನ್ನ ಅವರು,ಮತದಾರರಿಗೆ ಹಣ ಹಂಚುತ್ತಿದ್ದ ಆರೋಪದಲ್ಲಿ ಆತ ಸೇರಿದಂತೆ ಕನಿಷ್ಠ ಐವರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಶುಕ್ರವಾರ ರಾತ್ರಿ ಕಾರಿನಲ್ಲಿ ಬಂದಿದ್ದ ಬಿಜೆಪಿ ಬೆಂಬಲಿಗರು ಮತದಾರರಿಗೆ ಹಣ ಹಂಚುತ್ತಿದ್ದುದನ್ನು ಸಾಕೋಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಾಜಿ ಸಂಸದ ನಾನಾ ಪಟೋಲೆ ಅವರ ಬೆಂಬಲಿಗರು ಆಕ್ಷೇಪಿಸಿದ್ದರು. ಬಿಜೆಪಿ ಕಾರ್ಯಕರ್ತರು ಅವರ ಮೇಲೆ ಹಲ್ಲೆ ನಡೆಸಿದ್ದು,ಇದು ಗುಂಪು ಘರ್ಷಣೆಗೆ ಕಾರಣವಾಗಿತ್ತು. ಎರಡೂ ಕಡೆಗಳವರಿಗೆ ಗಂಭಿರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಇನ್ನೋರ್ವ ಪೊಲೀಸ್ ಅಧಿಕಾರಿ ಹೇಳಿದರು.

ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ ಬಳಿಕ ನಿತಿನ್ ಫುಕೆ ಕುಳಿತಿದ್ದ ಕಾರಿನಿಂದ ಹಣವನ್ನು ವಶಪಡಿಸಿಕೊಂಡಿದ್ದಾರೆ. ಉಭಯ ಗುಂಪುಗಳು ಪೊಲೀಸ್ ಠಾಣೆಯಲ್ಲಿ ಪರಸ್ಪರರ ವಿರುದ್ಧ ದೂರುಗಳನ್ನು ದಾಖಲಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News