ಉಡುಪಿ: ರಾಜ್ಯದ ಏಳು ಜಿಲ್ಲೆಗಳ ಯುವಕ-ಯುವತಿರಿಗೆ ತರಬೇತಿ ಶಿಬಿರ

Update: 2019-10-19 16:04 GMT

ಉಡುಪಿ, ಅ.19: ಯುವಜನತೆಗೆ ಸೂಕ್ತ ಸಮಯದಲ್ಲಿ ಸರಿಯಾದ ಮಾರ್ಗದರ್ಶನ ದೊರೆತಾಗ ಅವರು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿ ಕೊಂಡು ಸಮಾಜಮುಖಿಯಾಗಿ ಬದುಕುತ್ತಾರೆ. ಇಂತಹ ರಚನಾತ್ಮಕ ಕಾರ್ಯ ಗಳಲ್ಲಿ ಆಸಕ್ತರಾಗಿರುವ ಯುವ ಸಮೂಹವನ್ನು ಗುರುತಿಸಿ, ಒಗ್ಗೂಡಿಸಿ, ಅವರಿಗೆ ತರಬೇತಿ ನೀಡಿ ಸಮುದಾಯವನ್ನು ಜಾಗೃಗೊಳಿಸುವ ಬಹುದೊಡ್ಡ ಕಾರ್ಯ ದಲ್ಲಿ ನೆಹರು ಯುವ ಕೇಂದ್ರ ತನ್ನನ್ನು ತೊಡಗಿಸಿಕೊಂಡಿದೆ. 

ಉಡುಪಿಯ ಬ್ರಹ್ಮಗಿರಿಯಲ್ಲಿರುವ ನೇಶನಲ್ ಇನ್‌ಸ್ಟಿಟ್ಯೂಟ್ ಆಫ್ ಎಸ್‌ಎಚ್‌ಜಿ ತರಬೇತಿ ಸಂಸ್ಥೆ ‘ಪ್ರಗತಿ ಸೌಧ’ದಲ್ಲಿ ಅ.10ರಿಂದ ಪ್ರಾರಂಭ ಗೊಂಡಿರುವ ತರಬೇತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದ್ದು, ರಾಜ್ಯದ ಏಳು ಜಿಲ್ಲೆಗಳಿಂದ ಆಗಮಿಸಿರುವ ಯುವಕ-ಯುವತಿ ಶಿಬಿರಾರ್ಥಿಗಳು ಸಕ್ರಿಯರಾಗಿ ಶಿಬಿರದಲ್ಲಿ ಪಾಲ್ಗೊಳ್ಳುತಿದ್ದಾರೆ.

ಉಡುಪಿಯ ಜಿಲ್ಲಾಧಿಕಾರಿ ಜಿ. ಜಗದೀಶ್‌ರಿಂದ ಉದ್ಘಾಟನೆಗೊಂಡ ಶಿಬಿರದಲ್ಲಿ ಹತ್ತು ಹಲವು ವಿಚಾರಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ, ಯುವ ಸಂಘಗಳ ಭೇಟಿ, ಅಧ್ಯಯನ ಪ್ರವಾಸ, ಪ್ರವಾಸಿ ತಾಣಗಳ ಭೇಟಿ ಸೇರಿದಂತೆ ಹಲವು ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆಯುತ್ತಿವೆ.

ಉಡುಪಿ ನೆಹರು ಯುವ ಕೇಂದ್ರದ ಸಾರಥ್ಯದಲ್ಲಿ ನಡೆಯುತ್ತಿರುವ 15 ದಿನಗಳ ರಾಷ್ಟ್ರೀಯ ಯುವ ಸ್ವಯಂಸೇವಕರ ಪ್ರವೇಶ ತರಬೇತಿ ಆಯೋಜನೆ ಒಟ್ಟಾರೆ ಉದ್ದೇಶ ಹಾಗೂ ಅದರಲ್ಲಿ ಪಾಲ್ಗೊಳ್ಳುತ್ತಿರುವ 7 ಜಿಲ್ಲೆಗಳ ಯುವ ಸ್ವಯಂಸೇವಕರುಗಳ ಉತ್ಸಾಹ ಗಮನಿಸಿದರೆ, ಈ ತರಬೇತಿ ಪ್ರತಿಯೊಬ್ಬ ಯುವ ಸ್ವಯಂಸೇವಕರ ಯಶಸ್ಸಿನ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿಕೊಡಲಿದೆ ಎಂಬ ಆಶಾವಾದ ಮೂಡುತ್ತದೆ.

ಮುಂಜಾನೆ 5 ಗಂಟೆಯಿಂದ ಆರಂಭಗೊಳ್ಳುವ ಶಿಬಿರಾರ್ಥಿಗಳ ದಿನಚರಿ ರಾತ್ರಿ 10 ಗಂಟೆಯ ತನಕವೂ ನಿರಂತರವಾಗಿ ನಡೆಯುತ್ತದೆ. ಬೆಳಗಿನ ಪ್ರಾರ್ಥನೆ, ಯೋಗ, ದೈನಂದಿನ ಚಟುವಟಿಕೆಗಳ ಅವಲೋಕನ, ಎರಡು ಪ್ರತ್ಯೇಕ ತರಗತಿಗಳಲ್ಲಿ ಶಿಬಿರಾರ್ಥಿಗಳಿಗೆ ಉಪನ್ಯಾಸ, ತರಬೇತಿ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಎರಡು ಬ್ಯಾಚ್ ಗಳಿಗೆ ಒಟ್ಟು 8 ತರಗತಿಗಳು ನಡೆಯುತ್ತಿವೆ.

ತರಬೇತಿ ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರದ ಪರಿಚಯ, ಯುವ ಸಮುದಾಯದ ಸಬಲೀಕರಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳ ಮಾಹಿತಿ, ಯುವಕ ಮಂಡಲಗಳ ರಚನೆ, ನಿರ್ವಹಣೆ ಹಾಗೂ ಕಾರ್ಯಕ್ರಮ ಗಳು, ಭಾರತ ಸರಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳು, ಸ್ವ- ಉದ್ಯೋಗ ಮುಂತಾದವುಗಳ ಬಗ್ಗೆ ಮಗ್ರ ಮಾಹಿತಿ ಒದಗಿಸಲಾಗುತ್ತದೆ.

ವಿವಿಧ ಕ್ಷೇತ್ರಗಳ ಪರಿಣತ ಸಂಪನ್ಮೂಲ ವ್ಯಕ್ತಿಗಳಿಂದ ಧನಾತ್ಮಕ ಚಿಂತನೆ- ಪ್ರೇರಣೆ, ವ್ಯಕ್ತಿಗತ ಸಂಬಂಧ ಕೌಶಲಗಳು, ್ರಷ್ಟಾಚಾರ ಹಾಗೂ ಅದರ ನಿರ್ಮೂಲನೆಗೆ ಯುವಕರು ಕೈಗೊಳ್ಳಬಹುದಾದ ಮಾರ್ಗೋಪಾಯಗಳು, ಆರ್‌ಟಿಐ, ಸ್ವಯಂ ಜಾಗೃತಿ, ಪರಿಣಾಮಕಾರಿ ಸಂವಹನ ಕೌಶಲ್ಯ, ಸ್ವಾತಂತ್ರ ಹೋರಾಟ, ರಾಷ್ಟ್ರೀಯ ಭಾವೈಕ್ಯತೆ, ಭಾರತೀಯ ಸಂಸ್ಕೃತಿ ಹಾಗೂ ರಾಷ್ಟ್ರ ನಿರ್ಮಾಣ, ಭಾರತೀಯ ಸಂವಿಧಾನ, ಸಾಮಾಜಿಕ ಸಾಮರಸ್ಯ, ಜಲಶಕ್ತಿ ಅಭಿಯಾನ ಹಾಗೂ ಜಲ ಸಾಕ್ಷರತೆ, ಸಾಮಾಜಿಕ ಜಾಗೃತಿ, ಮಾದಕ ವ್ಯಸನದ ದುಷ್ಪರಿಣಾಮ, ಅದರ ನಿರ್ಮೂಲನೆಯಲ್ಲಿ ಯುವಕರ ಪಾತ್ರ ಸೇರಿದಂತೆ ಇನ್ನೂ ಅನೇಕ ವಿಷಯಗಳ ಕುರಿತು ತಜ್ಞರಿಂದ ವಿಷಯ ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಶಿಬಿರಾರ್ಥಿಗಳಿಗೆ ಅಧ್ಯಯನ ಪ್ರವಾಸವಾಗಿ ಸಾಣೂರು ಗ್ರಾಪಂ, ನಿಟ್ಟೆ ಗ್ರಾಪಂ, ನೇಜಾರು ಗ್ರಾಪಂಗಳಿಗೆ ಭೇಟಿ, ಅಲ್ಲಿನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಸಂವಾದ, ನಿಟ್ಟೆ ಎಸ್‌ಎಲ್‌ಆರ್‌ಎಂ ಘಟಕಕ್ಕೆ ಭೇಟಿ ನೀಡಿ ಘನ, ದ್ರವ ತ್ಯಾಜ್ಯ ನಿರ್ವಹಣೆಯ ವೀಕ್ಷಣೆ, ಮಿಯ್ಯಾರು ಸಿ.ಇ. ಕಾಮತ್ ಕುಶಲ ಕರ್ಮಿಗಳ ತರಬೇತಿ ಸಂಸ್ಥೆಗೆ ಭೇಟಿ, ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ವಿಜೇತ ಜಿಲ್ಲೆಯ ವಿವಿಧ ಯುವ ಸಂಘಗಳಾದ ಸಾಣೂರು ಯುವಕ ಮಂಡಲ, ಶ್ರೀದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಅಬ್ಬನಡ್ಕ ನಂದಳಿಕೆ, ಚೈತನ್ಯ ಯುವಕ ಮಂಡಲ ಕಲ್ಯ, ಕರಾವಳಿ ಯುವಕ ವೃಂದ ಹೆಜಮಾಡಿ, ಶ್ರೀಗುರು ಯುವಕ ಮಂಡಲ ನೇಜಾರು, ಮಹಾವಿಷ್ಣು ಯುವಕ ಮಂಡಲ ಕಟ್‌ಬೆಲ್ತೂರು ಮುಂತಾದೆಡೆ ಭೇಟಿ ನೀಡಿ ಅಲ್ಲಿನ ಯುವಕರುಗಳ ಜೊತೆ ಸಂವಾದ ನಡೆಸಲಾಗುತ್ತಿದೆ.

ಈ ನಡುವೆ ಶಿಬಿರಾರ್ಥಿಗಳನ್ನು ಕಾರ್ಕಳ ಗೊಮ್ಮಟಬೆಟ್ಟ, ಮೂಡುಬಿದಿರೆ ಸಾವಿರ ಕಂಬದ ಬಸದಿ, ಅತ್ತೂರು ಚರ್ಚ್, ಉಡುಪಿ ಕೃಷ್ಣ ಮಠ, ಹೆಜಮಾಡಿ ಬೀಚ್, ಮಲ್ಪೆ ಬೀಚ್, ಸೀ ವಾಕ್ ಮುಂತಾದ ಪ್ರವಾಸಿ ತಾಣಗಳಿಗೆ ಕರೆದೊಯ್ದು ಜಿಲ್ಲೆಯ ಪ್ರವಾಸಿ ತಾಣಗಳ ಪರಿಚಯ ಮಾಡಿಕೊಡಲಾಯಿತು.

ತರಬೇತಿಯ ಉದ್ದೇಶಗಳಲ್ಲಿ ಮುಖ್ಯವಾಗಿ ರಾಷ್ಟ್ರೀಯ ಯುವ ಕಾರ್ಯಕರ್ತರನ್ನು ಪರಿಪೂರ್ಣ ಯುವ ನಾಯಕರನ್ನಾಗಿ ರೂಪಿಸುವುದು ಮತ್ತು ಆ ಮೂಲಕ ಸರಕಾರದ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವಲ್ಲಿ, ಅನುಷ್ಠಾನ ಮಾಡುವಲ್ಲಿ ಮುತುವರ್ಜಿ ವಹಿಸುವುದು. ಸಮಾಜಮುಖಿ ಕಾರ್ಯಕ್ರಮಗಳು ಯುವ ಸಂಘಗಳ ಮೂಲಕ ಯುವ ಸಮುದಾಯ ಹಾಗೂ ಸಮಾಜಕ್ಕೆ ತಲುಪಿಸುವಂತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುವುದಾಗಿದೆ.

ಬಾರತ ಸರಕಾರದ ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೆಹರು ಯುವ ಕೇಂದ್ರ ಸಂಘಟನೆ ಬೆಂಗಳೂರು ಹಾಗೂ ನೆಹರು ಯುವ ಕೇಂದ್ರ ಉಡುಪಿ ಆಯೋಜಿಸಿರುವ 15 ದಿನಗಳ ತರಬೇತಿ ಕಾರ್ಯಕ್ರಮ ಸಂಪೂರ್ಣ ಉಚಿತವಾಗಿ ಊಟ ವಸತಿಯೊಂದಿಗೆ ನಡೆಯುತ್ತಿದೆ. ಶಿಬಿರದ ಜವಾಬ್ದಾರಿಯನ್ನು ನೆಹರು ಯುವ ಕೇಂದ್ರ ಸಂಘಟನೆಯ ರಾಜ್ಯ ನಿರ್ದೇಶಕ ಅತುಲ್ ನಿಕಂ ಮಾರ್ಗದರ್ಶನದಲ್ಲಿ ಉಡುಪಿ ನೆಹರು ಯುವ ಕೇಂದ್ರ ಜಿಲ್ಲಾ ಸಮನ್ವಯಾಧಿಕಾರಿ ವಿಲ್‌ಫ್ರೆಡ್ ಡಿಸೋಜಾ ವಹಿಸಿಕೊಂಡಿದ್ದಾರೆ.

ಬಾರತ ಸರಕಾರದ ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೆಹರು ಯುವ ಕೇಂದ್ರ ಸಂಘಟನೆ ಬೆಂಗಳೂರು ಹಾಗೂ ನೆಹರು ಯುವ ಕೇಂದ್ರ ಉಡುಪಿ ಆಯೋಜಿಸಿರುವ 15 ದಿನಗಳ ತರಬೇತಿ ಕಾರ್ಯಕ್ರಮ ಸಂಪೂರ್ಣ ಉಚಿತವಾಗಿ ಊಟ ವಸತಿಯೊಂದಿಗೆ ನಡೆಯುತ್ತಿದೆ. ಶಿಬಿರದ ಜವಾಬ್ದಾರಿಯನ್ನು ನೆಹರು ಯುವ ಕೇಂದ್ರ ಸಂಘಟನೆಯ ರಾಜ್ಯ ನಿರ್ದೇಶಕ ಅತುಲ್ ನಿಕಂ ಮಾರ್ಗದರ್ಶನದಲ್ಲಿ ಉಡುಪಿ ನೆಹರು ಯುವ ಕೇಂದ್ರ ಜಿಲ್ಲಾ ಸಮನ್ವಯಾಧಿಕಾರಿ ವಿಲ್‌ಫ್ರೆಡ್ ಡಿಸೋಜಾ ವಹಿಸಿಕೊಂಡಿದ್ದಾರೆ.

ತರಬೇತಿಯ ಕೊನೆಯಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ತರಬೇತಿ ಪಡೆದ ಯುವ ಸ್ವಯಂಸೇವಕರುಗಳಿಗೆ ಪ್ರಶಸ್ತಿ ಪತ್ರ, ಜಿಲ್ಲೆಯ ಯುವಕ ಮಂಡಲಗಳಿಗೆ ಕ್ರೀಡಾ ಸಾಮಾಗ್ರಿ ವಿತರಣೆಯೂ ನಡೆಯಲಿದೆ ಎಂದು ನೆಹರು ಯುವ ಕೇಂದ್ರದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News