ಆರ್ಥಿಕ ಹಿಂಜರಿತದ ವಿರುದ್ಧ ಸಂಘಟಿತ ಪ್ರಯತ್ನಗಳ ಅಗತ್ಯ

Update: 2019-10-19 16:14 GMT

ವಾಶಿಂಗ್ಟನ್, ಅ. 19: ಆರ್ಥಿಕ ಹಿಂಜರಿತದಿಂದಾಗಿ ಉಂಟಾಗಿರುವ ನಕಾರಾತ್ಮಕ ಪರಿಣಾಮಗಳ ತೀವ್ರತೆಯನ್ನು ಕಡಿಮೆಗೊಳಿಸಲು ಹಾಗೂ ಜಾಗತಿಕ ಬೆಳವಣಿಗೆಗಾಗಿ ಬಹುಪಕ್ಷೀಯತೆಯ ಆಶಯಕ್ಕೆ ಚೇತನ ನೀಡಲು ‘ಸಂಘಟಿತ ಪ್ರಯತ್ನಗಳು’ ಆಗಬೇಕಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಹೇಳಿದ್ದಾರೆ.

ವಾಶಿಂಗ್ಟನ್‌ನಲ್ಲಿ ನಡೆದ ಅಂತರ್‌ರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮತ್ತು ವಿಶ್ವಬ್ಯಾಂಕ್‌ನ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

‘‘ಹೆಚ್ಚಿದ ವ್ಯಾಪಾರ ಏಕೀಕರಣ, ಜಾಗತಿಕ ರಾಜಕೀಯ ಅನಿಶ್ಚಿತತೆಗಳು ಮತ್ತು ಹೆಚ್ಚುತ್ತಿರುವ ಸಾಲದ ಮಟ್ಟಗಳ ಹಿನ್ನೆಲೆಯಲ್ಲಿ ಪ್ರಬಲ ಜಾಗತಿಕ ಸಮನ್ವಯತೆ ಅಗತ್ಯವಾಗಿದೆ ಹಾಗೂ ಆರ್ಥಿಕ ಹಿಂಜರಿತವು ಬಿಕ್ಕಟ್ಟು ಆಗಿ ಪರಿವರ್ತನೆಯಾಗುವವರೆಗೆ ನಾವು ಕಾಯಬೇಕಾಗಿಲ್ಲ’’ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಪ್ರಸಕ್ತ ಚಾಲ್ತಿಯಲ್ಲಿರುವ ವ್ಯಾಪಾರ ಸಮರಗಳು ಮತ್ತು ರಕ್ಷಣಾತ್ಮಕ ಧೋರಣೆ (ಪ್ರೊಟೆಕ್ಶನಿಸಮ್)ಗಳ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ ಹಣಕಾಸು ಸಚಿವೆ, ‘‘ವ್ಯಾಪಾರ ಸಮರಗಳು ಮತ್ತು ರಕ್ಷಣಾತ್ಮಕ ಧೋರಣೆಗಳು ಅನಿಶ್ಚಿತತೆಗಳನ್ನು ಹುಟ್ಟುಹಾಕಿವೆ ಹಾಗೂ ಇವು ಅಂತಿಮವಾಗಿ ಬಂಡವಾಳ, ಸರಕುಗಳು ಮತ್ತು ಸೇವೆಗಳ ಹರಿವಿನ ಮೇಲೆ ಪರಿಣಾಮ ಬೀರುತ್ತವೆ’’ ಎಂದರು.

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ವಾರ್ಷಿಕ ಪೂರ್ಣಾಧಿವೇಶನದಲ್ಲಿ ಭಾರತೀಯ ನಿಯೋಗದ ನೇತೃತ್ವವನ್ನು ನಿರ್ಮಲಾ ಸೀತಾರಾಮನ್ ವಹಿಸಿದರು. ನಿಯೋಗದಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಹಾಗೂ ಇಲಾಖೆಯ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News