ವಿಶ್ವಸಂಸ್ಥೆ ಪ್ರಧಾನ ಕಚೇರಿ ವಾರಾಂತ್ಯಗಳಲ್ಲಿ ಬಂದ್

Update: 2019-10-19 16:17 GMT

ವಾಶಿಂಗ್ಟನ್, ಅ. 19: ಹಣಕಾಸು ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯು ವಾರಾಂತ್ಯಗಳಲ್ಲಿ ಮುಚ್ಚಿರುತ್ತದೆ.

‘‘ನ್ಯೂಯಾರ್ಕ್ ನಗರದಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿ ವಾರಾಂತ್ಯ (ಶನಿವಾರ ಮತ್ತು ರವಿವಾರ)ಗಳಲ್ಲಿ ಮುಚ್ಚಿರುತ್ತದೆ. ಇದಕ್ಕೆ ವಿಶ್ವಸಂಸ್ಥೆ ಎದುರಿಸುತ್ತಿರುವ ಹಣಕಾಸು ಬಿಕ್ಕಟ್ಟೇ ಕಾರಣ’’ ಎಂದು ವಿಶ್ವಸಂಸ್ಥೆ ಟ್ವಿಟರ್‌ನಲ್ಲಿ ತಿಳಿಸಿದೆ.

 ವಿಶ್ವಸಂಸ್ಥೆಯು ಬಿಡುಗಡೆ ಮಾಡಿರುವ ದಾಖಲೆಯೊಂದರ ಪ್ರಕಾರ, 131 ಸದಸ್ಯ ದೇಶಗಳು ತಮ್ಮ ವಾರ್ಷಿಕ ದೇಣಿಗೆಗಳನ್ನು ಪೂರ್ಣ ಪ್ರಮಾಣದಲ್ಲಿ ನೀಡಿವೆ. ಈ ಪೈಕಿ ಕೇವಲ 34 ದೇಶಗಳು ವಿಶ್ವಸಂಸ್ಥೆಯ ಹಣಕಾಸು ನಿಯಮದಂತೆ ನಿಗದಿತ 30 ದಿನಗಳ ಹೆಚ್ಚುವರಿ ಪಾವತಿ ಅವಧಿಯಲ್ಲೇ ನೀಡಿವೆ.

ಅಕ್ಟೋಬರ್ 11ರಂದು ವಿಶ್ವಸಂಸ್ಥೆಗೆ ಭಾರತದ ಖಾಯಂ ರಾಯಭಾರಿ ಸೈಯದ್ ಅಕ್ಬರುದ್ದೀನ್ ಹೇಳಿಕೆಯೊಂದನ್ನು ನೀಡಿ, ವಿಶ್ವಸಂಸ್ಥೆಗೆ ನೀಡಬೇಕಾಗಿರುವ ಎಲ್ಲ ಹಣವನ್ನು ಸರಿಯಾದ ಸಮಯದಲ್ಲಿ ನೀಡಿರುವ 35 ದೇಶಗಳ ಪೈಕಿ ಭಾರತವೂ ಒಂದು ಹೇಳಿದ್ದರು.

ವಿಶ್ವಸಂಸ್ಥೆಗೆ ನೀಡಬೇಕಾಗಿರುವ ಎಲ್ಲ ಹಣವನ್ನು ಸರಿಯಾದ ಸಮಯದಲ್ಲಿ ಪಾವತಿ ಮಾಡಿದ ಇತರ ದೇಶಗಳಲ್ಲಿ ಕೆನಡ, ಸಿಂಗಾಪುರ, ಭೂತಾನ್, ಫಿನ್‌ಲ್ಯಾಂಡ್, ನ್ಯೂಝಿಲ್ಯಾಂಡ್ ಮತ್ತು ನಾರ್ವೆಗಳು ಸೇರಿವೆ.

ವಿಶ್ವಸಂಸ್ಥೆಯು ಒಟ್ಟು 193 ಸದಸ್ಯ ದೇಶಗಳನ್ನು ಹೊಂದಿವೆ.

ವಿಶ್ವಸಂಸ್ಥೆಯ 2018-19ರ ಕಾರ್ಯನಿರ್ವಹಣಾ ಬಜೆಟ್ ಸುಮಾರು 5.4 ಬಿಲಿಯ ಡಾಲರ್ (ಸುಮಾರು 38,390 ಕೋಟಿ ರೂಪಾಯಿ) ಆಗಿದೆ. ಇದರಲ್ಲಿ ಶಾಂತಿಪಾಲನಾ ಕಾರ್ಯಾಚರಣೆಗಳಿಗೆ ತಗಲುವ ವೆಚ್ಚ ಸೇರಿಲ್ಲ.

ಭಾರತವು ಈ ವರ್ಷ ವಿಶ್ವಸಂಸ್ಥೆಗೆ 2,32,53,808 ಡಾಲರ್ (ಸುಮಾರು 165 ಕೋಟಿ ರೂಪಾಯಿ) ದೇಣಿಗೆಯನ್ನು ನೀಡಿದೆ.

ಯುದ್ಧಪೀಡಿತ ಸಿರಿಯ ದೇಶವು 30 ದಿನಗಳ ಹೆಚ್ಚುವರಿ ಪಾವತಿ ಅವಧಿಯ ಕೊನೆಯಲ್ಲಿ ತನ್ನ ದೇಣಿಗೆಗಳನ್ನು ನೀಡಿದೆ.

ಮಹಾಕಾರ್ಯದರ್ಶಿ ಎಚ್ಚರಿಕೆ

ವಿಶ್ವಸಂಸ್ಥೆಯು ಒಂದು ದಶಕದಲ್ಲೇ ಅತ್ಯಂತ ಕಠಿಣ ಆರ್ಥಿಕ ಪರಿಸ್ಥಿತಿಯನ್ನು ಎದುರಿಸುತ್ತಿದೆ ಹಾಗೂ ಮುಂದಿನ ತಿಂಗಳು ತನ್ನ ಉದ್ಯೋಗಿಗಳಿಗೆ ವೇತನ ನೀಡಲು ಸಾಧ್ಯವಾಗದ ಪರಿಸ್ಥಿತಿಯನ್ನು ಅದು ಎದುರಿಸುತ್ತಿದೆ ಎಂಬುದಾಗಿ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಈಗಾಗಲೇ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News