2,186 ಕೋ. ರೂ. ‘ಡಿ-ಕಂಪೆನಿಗೆ’ ವರ್ಗಾವಣೆ ಪ್ರಕರಣ: ಡಿಎಚ್‌ಎಫ್‌ಎಲ್ ಕಚೇರಿಗಳ ಮೇಲೆ ಈ.ಡಿ. ದಾಳಿ

Update: 2019-10-19 16:22 GMT

ಹೊಸದಿಲ್ಲಿ, ಅ. 19: ಡಿಎಚ್‌ಎಫ್‌ಎಲ್ 2,186 ಕೋಟಿ ರೂಪಾಯಿ ಸಾಲವನ್ನು ದುಬೈಯಲ್ಲಿರುವ ಡಿ-ಕಂಪೆನಿಗೆ ವರ್ಗಾಯಿಸಿರುವುದು ಪತ್ತೆಯಾದ ಬಳಿಕ ಡಿಎಚ್‌ಎಫ್‌ಎಲ್‌ನ ಹಲವು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ಶನಿವಾರ ದಾಳಿ ನಡೆಸಿದೆ.

ಡಿಎಚ್‌ಎಫ್‌ಎಲ್‌ಗೆ ಸಂಬಂಧಿಸಿ ಮುಂಬೈ ಹಾಗೂ ಇತರ ಹಲವು ಪ್ರದೇಶಗಳಲ್ಲಿರುವ ಸುಮಾರು 8 ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳ ಹಲವು ತಂಡಗಳು ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ದಾಳಿಯ ವೇಳೆ ಸನ್‌ಬ್ಲಿಂಕ್ ರಿಯಲ್ ಎಸ್ಟೇಟ್ ಪ್ರೈವೇಟ್ ಲಿಮಿಟೆಡ್ ಹಾಗೂ ಆರ್‌ಕೆಡಬ್ಲು ಡೆವಲಪ್ಪರ್ಸ್‌ಗೆ ಡಿಎಚ್‌ಎಫ್‌ಎಲ್ ನೀಡಿದ್ದ ಸಾಲಕ್ಕೆ ಸಂಬಂಧಿಸಿದ ದಾಖಲೆಗಳನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ತನಿಖಾಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ ಹಾಗೂ ದುಬೈಯಲ್ಲಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹವರ್ತಿ ಇಕ್ಬಾಲ್ ಮಿರ್ಚಿಗೆ 2,186 ಕೋಟಿ ರೂಪಾಯಿ ರವಾನೆಯಾಗಲು ಮಾರ್ಗ ಸುಗಮಗೊಳಿಸಿದ ಸನ್‌ಲಿಂಕ್ ರಿಯಲ್ ಎಸ್ಟೇಟ್ ಪ್ರೈವೇಟ್ ಲಿಮಿಟೆಡ್‌ಗೆ ಸಾಲ ನೀಡಿದ್ದಾರೆಂದು ಹೇಳಲಾದ ಡಿಎಚ್‌ಎಫ್‌ಎಲ್‌ನ ಅಧಿಕಾರಿಗಳನ್ನು ಶೀಘ್ರ ಕರೆದು ವಿಚಾರಣೆ ನಡೆಸಲಾಗುವುದು ಎಂದು ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿದೆ.

ಇಕ್ಬಾಲ್ ಮಿರ್ಚಿಗೆ ನಂಟು ಹೊಂದಿದ ಮೂರು ಸೊತ್ತುಗಳ ಬಗ್ಗೆ ತನಿಖೆ ನಡೆಸಿದ ಬಳಿಕ ಮೊದಲ ಬಾರಿಗೆ ಡಿಎಚ್‌ಎಫ್‌ಎಲ್ ಜಾರಿ ನಿರ್ದೇಶನಾಲಯದ ಪರಿಶೀಲನೆಗೆ ಒಳಗಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News