ಡೇರಾ ಸಚ್ಚಾ ಸೌಧಾಕ್ಕೆ ಭೇಟಿ ನೀಡಿದ ಹರ್ಯಾಣದ ಚುನಾವಣಾ ಅಭ್ಯರ್ಥಿ

Update: 2019-10-19 16:25 GMT

ಸಿರ್ಸಾ, ಅ. 19: ಹರ್ಯಾಣ ವಿಧಾನ ಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್‌ನ ಮಾಜಿ ಹಿರಿಯ ನಾಯಕ ರಂಜಿತ್ ಸಿಂಗ್ ಮಾಧ್ಯಮದ ಕಣ್ಣು ತಪ್ಪಿಸಲು ಶುಕ್ರವಾರ ಬೆಳಗ್ಗೆ ಡೇರಾ ಸಚ್ಚಾ ಸೌಧಾಕ್ಕೆ ಭೇಟಿ ನೀಡಿದ್ದಾರೆ.

ಡೇರಾ ಸಚ್ಚಾ ಸೌಧಾ ಅತ್ಯಾಚಾರ ಹಾಗೂ ಕೊಲೆ ಆರೋಪಿ ಗುರ್ಮಿತ್ ಸಿಂಗ್ ನೇತೃತ್ವದ ಸಾಮಾಜಿಕ-ಧಾರ್ಮಿಕ ಪಂಥ. ಪ್ರಸ್ತುತ ಗುರ್ಮಿತ್‌ನನ್ನು ರೋಹ್ಟಕ್‌ನ ಕಾರಾಗೃಹದಲ್ಲಿ ಇರಿಸಲಾಗಿದೆ.

‘‘ಅವರು (ರಂಜಿತ್ ಸಿಂಗ್) ಮುಂಜಾನೆ ಇಲ್ಲಿದ್ದರು. ಸ್ಥಳೀಯ ರಾಜಕಾರಣಿಗಳು ಇಲ್ಲಿಗೆ ನಿರಂತರ ಭೇಟಿ ನೀಡುತ್ತಿದ್ದಾರೆ. ಆದರೆ, ಅವರು ಎಂದಿಗೂ ಅದನ್ನು ಬಹಿರಂಗಪಡಿಸುವುದಿಲ್ಲ’’ ಎಂದು ಡೇರಾದ ಸಮೀಪ ನಿಯೋಜಿತರಾಗಿರುವ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಶೀರ್ವಾದ ಪಡೆಯಲು ರಾಜಕಾರಣಿಗಳು ಡೇರಾಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು 2014ರಿಂದ ಕೂಗು ಕೇಳಿ ಬಂದಿತ್ತು. ಹರ್ಯಾಣದಲ್ಲಿ ಗುರ್ಮಿತ್‌ನ 60 ಲಕ್ಷಕ್ಕೂ ಅಧಿಕ ಬೆಂಬಲಿಗರು ಇರುವುದರಿಂದ ಹಲವು ರಾಜಕಾರಣಿಗಳು ಡೇರಾಕ್ಕೆ ಭೇಟಿ ನೀಡುತ್ತಿದ್ದಾರೆ.

ಶಿಕ್ಷೆಗೆ ಒಳಗಾಗುವುದಕ್ಕಿಂತ ಮುನ್ನ ಗುರ್ಮಿತ್‌ನನ್ನು ಪ್ರಧಾನಿ ನರೇಂದ್ರ ಮೋದಿ ಪ್ರಶಂಸಿಸಿದ್ದರು. ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಅವರು ಗುರ್ಮಿತ್‌ನೊಂದಿಗೆ ಪೊರಕೆ ಹಿಡಿದು ನೆಲ ಸ್ವಚ್ಛಗೊಳಿಸಿದ್ದರು.

ಕಳೆದ ಹರ್ಯಾಣ ಹಾಗೂ ಮಹಾರಾಷ್ಟ್ರ ವಿಧಾನ ಸಭೆ ಚುನಾವಣೆಗಿಂತ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಗುರ್ಮಿತ್ ನನ್ನು ಭೇಟಿಯಾಗಿದ್ದರು. ಮೊದಲ ಬಾರಿಗೆ ಬಿಜೆಪಿಯನ್ನು ಬೆಂಬಲಿಸುವುದಾಗಿ ಡೇರಾ ಹೇಳಿತ್ತು. ಇದರಿಂದಾಗಿ ಹರ್ಯಾಣ ವಿಧಾನ ಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜಯಬೇರಿ ದಾಖಲಿಸಿತ್ತು.

ಗುರ್ಮಿತ್ ರಾಮ್ ರಹೀಮ್‌ನ ಅತ್ಯಾಚಾರ ಹಾಗೂ ಕೊಲೆ ಆರೋಪ ಸಾಬೀತಾದ ಬಳಿಕ ರಾಜಕಾರಣಿಗಳು ಡೇರಾವನ್ನು ಸಂಪರ್ಕಿಸುವುದು ಕಡಿಮೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News