ಮಂಗಳೂರು: ‘ಹೋಂ ಸ್ಟೇ, ಪಿಜಿಗೆ ಲೈಸನ್ಸ್ ಕಡ್ಡಾಯ’

Update: 2019-10-19 16:26 GMT

ಮಂಗಳೂರು, ಅ.19: ನಗರದ ಹೆಚ್ಚಿನ ಉದ್ದಿಮೆದಾರರು, ಹೋಂ ಸ್ಟೇ, ಪಿಜಿಗಳನ್ನು ನಡೆಸುವವರು ಮಂಗಳೂರು ಮಹಾನಗರ ಪಾಲಿಕೆಯಿಂದ ಪರವಾನಿಗೆ ಪಡೆಯದೇ/ನವೀಕರಿಸದೆ ಮುಂದುವರಿಸುತ್ತಿರುವುದು ಪಾಲಿಕೆಯ ಗಮನಕ್ಕೆ ಬಂದಿದ್ದು, ಪರವಾನಿಗೆ ಪಡೆಯುವುದು ಕಡ್ಡಾಯ ವಾಗಿದೆ ಎಂದು ಮನಪಾ ಆಯುಕ್ತ ಶಾನಾಡಿ ಅಜಿತ್‌ ಕುಮಾರ್ ಹೆಗ್ಡೆ ತಿಳಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಉದ್ದಿಮೆ ನಡೆಸುತ್ತಿರುವ ಎಲ್ಲ ಉದ್ದಿಮೆದಾರರು ಪ್ರತಿ ಆರ್ಥಿಕ ವರ್ಷಾಂತ್ಯದ ಮಾರ್ಚ್ ತಿಂಗಳೊಳಗೆ ತಮ್ಮ ಉದ್ದಿಮೆ ಪರವಾನಿಗೆಯನ್ನು ಪಾಲಿಕೆಯಲ್ಲಿ ನವೀಕರಿಸಿಕೊಂಡು ಉದ್ದಿಮೆಯನ್ನು ಮುಂದುವರಿಸಬೇಕು. ಹೊಸ ಉದ್ದಿಮೆ ಪ್ರಾರಂಭಿಸುವ ಮೊದಲು ಉದ್ದಿಮೆ ಪರವಾನಿಗೆಯನ್ನು ಪಡೆದುಕೊಂಡು ಉದ್ದಿಮೆಯನ್ನು ನಡೆಸಬೇಕು ಎಂದರು.

ಪಾಲಿಕೆಯ ವ್ಯಾಪ್ತಿಯಲ್ಲಿ ಪ್ರಸ್ತುತ ಉದ್ದಿಮೆ ನಡೆಸುತ್ತಿರುವ ಎಲ್ಲ ಪಿಜಿ ಮತ್ತು ಹೋಂಸ್ಟೇಗಳ ಮಾಲಕರು ನಿಗದಿತ ನಮೂನೆಯಲ್ಲಿ ಸೂಕ್ತ ದಾಖಲೆಯೊಂದಿಗೆ ಅರ್ಜಿಯನ್ನು ಸಲ್ಲಿಸಿ ನ.15ರೊಳಗೆ ಕಡ್ಡಾಯವಾಗಿ ಪರವಾನಿಗೆ ಪಡೆಯಬೇಕು. ನವೀಕರಿಸಲು ಬಾಕಿ ಇರುವ ಉದ್ದಿಮೆದಾರರು ಪರವಾನಿಗೆಯನ್ನು ನವೀಕರಿಸಬೇಕು. ತಪ್ಪಿದ್ದಲ್ಲಿ ಮುನ್ಸೂಚನೆ ನೀಡದೆ ತಮ್ಮ ಉದ್ದಿಮೆಯನ್ನು ಸ್ಥಗಿತಗೊಳಿಸುವ ಬಗ್ಗೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು. ಮುಂದಿನ ಎಲ್ಲ ಆಗು-ಹೋಗುಗಳಿಗೆ ಉದ್ದಿಮೆದಾರರೇ ಜವಾಬ್ದಾರರು ಎಂದು ಪಾಲಿಕೆಯ ಆಯುಕ್ತರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News