ಮಂಗಳೂರು ತಾಲೂಕುಮಟ್ಟದ ಕಲಾಶ್ರೀ ಕಾರ್ಯಕ್ರಮ

Update: 2019-10-19 16:32 GMT

ಮಂಗಳೂರು, ಅ.19: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು (ಗ್ರಾ) ವತಿಯಿಂದ ಗ್ರಾಮಾಂತರ ವ್ಯಾಪ್ತಿಯ ಮಂಗಳೂರು ತಾಲೂಕು ಮಟ್ಟದ ಕಲಾಶ್ರೀ ಕಾರ್ಯಕ್ರಮವು ವಾಮಂಜೂರಿನ ಎಸ್‌ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆಯಲ್ಲಿ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೂಡುಶೆಡ್ಡೆ ಗ್ರಾಪಂ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಮಕ್ಕಳಿಗೆ ವಿದ್ಯೆಯೊಂದಿಗೆ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಬೇಕು. ಯಕ್ಷಗಾನದಂತಹ ಕಲೆಯನ್ನು ಕಲಿಯಲು ಮಕ್ಕಳಲ್ಲಿ ಆಸಕ್ತಿ ಮೂಡಿಸಬೇಕು. ಇಂತಹ ಕಾರ್ಯಕ್ರಮದಿಂದ ಮಕ್ಕಳ ಪ್ರತಿಭೆ ಬೆಳೆಯಲು ಪೂರಕವಾಗಿದೆ ಎಂದು ಶುಭ ಹಾರೈಸಿದರು.

ತಾಪಂ ಅಧ್ಯಕ್ಷ ಮುಹಮ್ಮದ್ ಮೋನು ಮಾತನಾಡಿ, ಪ್ರತಿಯೊಂದು ಮಗುವಿಗೂ ತನ್ನದೇ ಆದ ಪ್ರತಿಭೆ ಇರುತ್ತದೆ. ಪ್ರತಿಭೆ ಗ್ರಾಮ, ತಾಲೂಕು, ರಾಜ್ಯ ಮಟ್ಟದಲ್ಲಿ ಬೆಳಗಿ ಹೆತ್ತವರಿಗೆ ಹೆಮ್ಮೆ ತರುವುಂತಾಗಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳ ಜ್ಯೋತಿ ಸಮಗ್ರ ಶಾಲೆಯ ಆಡಳಿತ ಸಂಚಾಲಕ ಗಣೇಶ್ ಭಟ್ ವಹಿಸಿದ್ದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ಯಾಮಲಾ ಸಿ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು.

ಸ್ಪರ್ಧಾತ್ಮಕ ಚಟುವಟಿಕೆಗಳ ತೀರ್ಪುಗಾರರಾಗಿ ಪ್ರಮೋದ್ ಉಳ್ಳಾಲ್, ಕುಶಾಲಪ್ಪ, ಸವಿತಾ ಶೆಟ್ಟಿ, ವಾಸು, ದಿನೇಶ್ ವಿಶ್ವಕರ್ಮ, ರಾಘವೇಂದ್ರ, ಶಾಲಿನಿ ಪಾಲ್ಗೊಂಡಿದರು. ಸ್ಪರ್ಧಾತ್ಮಕ ಚಟುವಟಿಕೆಗಳಾದ ಸೃಜನಾತ್ಮಕ ಕಲೆ, ಬರವಣಿಗೆ, ಪ್ರದರ್ಶನ ಕಲೆ, ವಿಜ್ಞಾನದಲ್ಲಿ ನೂತನ ಆವಿಷ್ಕಾರದಂತಹ ಸ್ಪರ್ಧೆಗಳಲ್ಲಿ ಒಟ್ಟು 75 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಮೇಲ್ವಿಚಾರಕಿ ಭಾರತಿ ಕೆ., ಉಷಾ ಡಿ. ಉಪಸ್ಥಿತರಿದ್ದರು. ಅಶ್ವಿನಿ ಎಂ.ಕೆ. ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಮೇಲ್ವಿಚಾರಕಿ ಶೀಲಾವತಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News