ಬೆಳ್ತಂಗಡಿ: 3.50 ಕೋ.ರೂ. ವೆಚ್ಚದ ತಾ.ಪಂ. ನೂತನ ಕಟ್ಟಡಕ್ಕೆ ಶಿಲಾನ್ಯಾಸ

Update: 2019-10-19 16:33 GMT

ಬೆಳ್ತಂಗಡಿ: ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಬೇಕು ಎನ್ನುವ ಚಿಂತನೆಯೊಂದಿಗೆ ತಾ.ಪಂ. ಕಟ್ಟಡ ನಿರ್ಮಾಣ ಶಿಲಾನ್ಯಾಸವನ್ನು ನೆರವೇರಿಸಲಾಗಿದೆ. ರಾಜ್ಯದಲ್ಲೇ ಮಾದರಿಯಾದ ಸುಸಜ್ಜಿತ ಕಟ್ಟಡ ಹಾಗೂ ಸಭಾಂಗಣ ನಿರ್ಮಿಸುವ ಗುರಿಯಿದ್ದು ಅದಕ್ಕಾಗಿ ಹೆಚ್ಚುವರಿ ಅನುದಾನಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಶನಿವಾರ ಬೆಳ್ತಂಗಡಿ ತಾಲೂಕು ಪಂಚಾಯಿತಿ ಆವರಣದಲ್ಲಿ 3.50 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ತಾಲೂಕು ಪಂಚಾಯಿತಿಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ, ಬಳಿಕ ತಾ.ಪಂ ಸಭಾಂಗಣದಲ್ಲಿ ನಡೆಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅನುದಾನ ಕಾರ್ಯನಿರ್ವಹಿಸುತ್ತಿದ್ದು ನೂತನ ಕಟ್ಟಡಕ್ಕೆ ಗ್ರಾಮೀಣ ಅಭಿವೃದ್ಧಿ ಸಚಿವರಲ್ಲಿ ಹೆಚ್ಚಿನ ಅನುದಾನ ತರುವಲ್ಲಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು. 

ಮುಖ್ಯ ಅತಿಥಿ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ, ತಾ.ಪಂ. ಕಟ್ಟಡ ನಿರ್ಮಾಣ ಮಾಡುವ ಕನಸು ಹಲವು ವರ್ಷಗಳದ್ದಾಗಿತ್ತು. ಜಿ.ಪಂ ಸದಸ್ಯರ ಮುತುವರ್ಜಿಯಿಂದ ಕಟ್ಟಡಕ್ಕೆ ಅನುದಾನ ಮಂಜೂರಾಗಿದ್ದು ಕಳೆದ ವರ್ಷವೇ ಒಂದು ಕೋಟಿ ರೂ. ಮಂಜೂರಾತಿ ನೀಡಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಹೆಚ್ಚುವರಿ ಅನುದಾನ ನೀಡಬೇಕೆಂಬ ಉದ್ದೇಶದಿಂದ ತಡವಾಗಿ ಕಾಮಗಾರಿ ಪ್ರಾರಂಭಿಸಲಾಗಿದ್ದು ಈ ಬಾರಿ 3.5 ಕೋಟಿ ರೂ ಮಂಜೂರಾತಿ ದೊರಕಿದೆ. ಶೀಘ್ರವೇ ಉತ್ತಮ ಕಟ್ಟಡ ನಿರ್ಮಾಣಗೊಂಡು ಎಲ್ಲರಿಗೂ ಉಪಯೋಗವಾಗಲಿ. ಇದಕ್ಕೆ ಅನುದಾನ ತರಿಸುವಲ್ಲಿ ಜಿ.ಪಂ. ಸದಸ್ಯರು ಹಾಗೂ ಶಾಸಕ ಪ್ರಯತ್ನ ಗಮನಾರ್ಹ ಎಂದರು. 

ಅಧ್ಯಕ್ಷತೆ ವಹಿಸಿದ್ದ ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ ಅವರು, ಅಭಿವೃದ್ಧಿಯ ದೃಷ್ಟಿಯಿಂದ ಹೊಸತಾಗಿ ನಿರ್ಮಾಣವಾಗುತ್ತಿರುವ ನೂತನ ಕಟ್ಟಡವು ಶೀಘ್ರವಾಗಿ ರಚನೆಗೊಳ್ಳಲಿ. ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿಯಾಗದೇ ಮಾದರಿ ತಾಲೂಕು ಪಂಚಾಯಿತಿ ಎಂಬ ಹೆಗ್ಗಳಿಗೆ ಪಾತ್ರವಾಗಲಿ ಎಂದು ಶುಭ ಹಾರೈಸಿದರು. 

ಬೆಳ್ತಂಗಡಿ ತಹಸೀಲ್ದಾರ್ ಗಣಪತಿ ಶಾಸ್ತ್ರಿ, ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ ಮಾತನಾಡಿ ಶುಭಹಾರೈಸಿದರು. ಜೋಯೆಲ್ ಮೆಂಡೋನ್ಸಾ ಮಾತನಾಡಿ ತಾ.ಪಂ. ಪರವಾಗಿ ಅಭಿನಂದನೆ ಸಲ್ಲಿಸಿದರು.

ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್, ತಾ.ಪಂ.ಉಪಾಧ್ಯಕ್ಷೆ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಟಿ.ಸೆಬಾಸ್ಟಿನ್, ಜಿ.ಪಂ. ಸದಸ್ಯರಾದ ಕೆ.ಕೆ. ಶಾಹುಲ್ ಹಮೀದ್, ಮಮತಾ ಎಂ.ಶೆಟ್ಟಿ, ಶೇಖರ್ ಕುಕ್ಕೇಡಿ, ನಮಿತಾ, ಸೌಮ್ಯಲತಾ ಜಯಂತ್ ಗೌಡ ಉಪಸ್ಥಿತರಿದ್ದರು,
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಕೆ.ಇ.ಜಯರಾಂ ಸ್ವಾಗತಿಸಿದರು. ಜಿ.ಪಂ. ಇಂಜಿನಿಯರಿಂಗ್ ವಿಭಾಗದ ಎಇಇ ಚೆನ್ನಪ್ಪ ಮೊಯ್ಲಿ ವಂದಿಸಿದರು. ತಾಪಂನ ಜಯಾನಂದ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News