ಅ. 21ರಂದು ಬಿ.ಸಿ.ರೋಡ್ ಸೌಂದರ್ಯೀಕರಣ ಯೋಜನೆಗೆ

Update: 2019-10-19 16:44 GMT

ಬಂಟ್ವಾಳ, ಅ. 19: ಸುಮಾರು 20 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಬಿ.ಸಿ.ರೋಡ್ ಸೌಂದರ್ಯೀಕರಣ ಯೋಜನೆಗೆ ಅ. 21ರಂದು ಶಿಲಾನ್ಯಾಸ ನಡೆಯಲಿದೆ ಎಂದು ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಹೇಳಿದರು.

ಶನಿವಾರ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಂಗಳೂರಿನ ವಿನ್ಯಾಸಕಾರ ಧರ್ಮರಾಜ್ ಅವರ ನೆರವಿನಿಂದ ಈಗಾಗಲೇ ಯೋಜನೆ ರೂಪುರೇಷೆ ತಯಾರಾಗಿದೆ. ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಶಿಲಾನ್ಯಾಸ ನೆರವೇರಿಸಲಿದ್ದು, ಸಂಸದ ನಳಿನ್ ಕುಮಾರ್ ಕಟೀಲ್, ಕಂದಾಯ ಸಚಿವ ಆರ್. ಅಶೋಕ್ ಉಪಸ್ಥಿತರಿರುವರು. ಬಳಿಕ ಕಂದಾಯ ಸಚಿವರು 700 ಮಂದಿಗೆ 94ಸಿ ಮತ್ತು 94ಸಿಸಿ ಹಕ್ಕುಪತ್ರವನ್ನು ವಿತರಿಸಲಿದ್ದಾರೆ ಎಂದು ಹೇಳಿದರು.

ನಗರ ಸೌಂದರ್ಯವೃದ್ಧಿಗೆ ಈಗಾಗಲೇ ಸಮಿತಿಯನ್ನು ರಚಿಸಲಾಗಿದ್ದು, ಹೊರದೇಶದಲ್ಲಿರುವ ಬಂಟ್ವಾಳದವರು ಇದರಲ್ಲಿದ್ದಾರೆ. ಉದ್ಯಮಿಗಳಾದ ಶಶಿಕಿರಣ್ ಶೆಟ್ಟಿ, ಸಂತೋಷ್ ಕುಮಾರ್, ಬಿ.ಎ,ಮೊಯ್ದೀನ್, ಜೆರಾಲ್ಡ್ ಡಿಮೆಲ್ಲೊ, ಜಗನ್ನಾಥ ರಾವ್ ಮುಖ್ಯವಾಗಿ ಇರುತ್ತಾರೆ. ಎಂಆರ್‍ಪಿಎಲ್, ಎನ್‍ಎಂಪಿಟಿ, ಒಎನ್‍ಜಿಸಿ, ಎಚ್‍ಪಿಸಿಎಲ್, ಬಿಪಿಸಿಎಲ್, ಐಒಸಿಎಲ್ ತನ್ನ ನಿಧಿಯನ್ನು ಅಭಿವೃದ್ಧಿಗೆ ನೀಡಲಿದೆ. ಇದರಲ್ಲಿ ಎನ್‍ಎಂಪಿಟಿ ವತಿ ಯಿಂದ ಅತ್ಯುತ್ಕೃಷ್ಟ ದರ್ಜೆಯ ಶೌಚಾಲಯ ನಿರ್ಮಾಣವಾಗಲಿದೆ ಎಂದವರು ಮಾಹಿತಿ ನೀಡಿದರು.

2 ಕೋಟಿ ರೂ.ಅಂದಾಜು ವೆಚ್ಚದ ಸಿಸಿ ಕ್ಯಾಮರಾ, ಸರ್ವೀಸ್ ರಸ್ತೆಯಲ್ಲಿ ಫುಟ್‍ಪಾತ್, ವಾರದ ಸಂತೆ, ಕೈಕುಂಜೆ ರಸ್ತೆ ಅಗಲೀಕರಣ, ಬಸ್ ನಿಲ್ದಾಣ ಎದುರು ಸರ್ಕಲ್, ಬೀದಿದೀಪ, ಪಾರ್ಕಿಂಗ್ ಈ ಯೋಜನೆಯಲ್ಲಿ ಒಳಗೊಂಡಿದೆ. 10 ಕೋಟಿ ರೂ ಸಿ.ಎಸ್.ಆರ್ ಫಂಡ್ ನಿಂದ ದೊರಕಲಿದ್ದರೆ, ಮುಖ್ಯಮಂತ್ರಿಯವರು ಈಗಾಗಲೇ 5 ಕೋಟಿ ರೂಗಳನ್ನು ಘೋಷಿಸಿದ್ದಾರೆ. ಉಳಿದದ್ದನ್ನು ತನ್ನ ನಿಧಿಯಿಂದ ಒದಗಿಸಲಾಗುತ್ತದೆ ಎಂದು ಶಾಸಕರು ತಿಳಿಸಿದರು.

ಅತಿಕ್ರಮಣ ತೆರವು, ಹೊಸ ಭೂಸ್ವಾಧೀನ ಇಲ್ಲ

ಯೋಜನೆ ಜಾರಿಗೆ ಸಾರ್ವಜನಿಕರ ಸಹಕಾರ ಮುಖ್ಯವಾಗಿದ್ದು, ಈಗಾಗಲೇ ಗುರುತು ಮಾಡಲಾದ ಜಾಗದಲ್ಲಿ ಅತಿಕ್ರಮಣಗಳಿದ್ದರೆ ತೆರವುಗೊಳಿಸಲಾಗುವುದು. ಯಾವುದೇ ವಶೀಲಿ ಮಧ್ಯಸ್ಥಿಕೆಗೆ ಇಲ್ಲಿ ಅವಕಾಶವಿಲ್ಲ ಎಂದ ಶಾಸಕರು, ಹೊಸದಾಗಿ ಭೂಸ್ವಾಧೀನ ಪ್ರಕ್ರಿಯೆ ಇದಕ್ಕೆ ಮಾಡುವುದಿಲ್ಲ ಎಂದು ತಿಳಿಸಿದರು. ಇದಾದ ಬಳಿಕ ಬಂಟ್ವಾಳಕ್ಕೆ ಸಮರ್ಪಕವಾದ ಯುಜಿಡಿ, ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಸಹಿತ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದದವರು ಪ್ರಕಟಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಪ್ರಮುಖರಾದ ಜಿ.ಆನಂದ, ಎ.ಗೋವಿಂದ ಪ್ರಭು, ಬಿ.ದೇವದಾಸ ಶೆಟ್ಟಿ, ಕೆ.ಹರಿಕೃಷ್ಣ ಬಂಟ್ವಾಳ್, ಸಂತೋಷ್ ಕುಮಾರ್ ಬೋಳಿಯಾರ್, ರಾಮದಾಸ ಬಂಟ್ವಾಳ, ಪ್ರಭಾಕರ ಪ್ರಭು, ಮೋನಪ್ಪ ದೇವಸ್ಯ, ನಾರಾಯಣ ಶೆಟ್ಟಿ, ವಿಜಯ ರೈ, ರಮಾನಾಥ ರಾಯಿ ಮತ್ತಿತರರು ಉಪಸ್ಥಿತರಿದ್ದರು,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News