ಮಂಗಳೂರು: ಸ್ಮಾರ್ಟ್ ಸಿಟಿಯಡಿ ವೆನ್ಲಾಕ್- ಲೇಡಿಗೋಶನ್ ಮತ್ತೆ ಮೇಲ್ದರ್ಜೆಗೆ

Update: 2019-10-19 17:01 GMT

ಮಂಗಳೂರು, ಅ.19: ದ.ಕ. ಜಿಲ್ಲಾಸ್ಪತ್ರೆ ವೆನ್ಲಾಕ್ ಹಾಗೂ ಲೇಡಿಗೋಶನ್ ಮಕ್ಕಳ ಆಸ್ಪತ್ರೆ ಸ್ಮಾರ್ಟ್ ಸಿಟಿಯಡಿ ಮತ್ತೆ ಮೇಲ್ದರ್ಜೆಗೇರಲಿದೆ. ಸುಮಾರು 45 ಕೋಟಿ ರೂ. ವೆಚ್ಚದಲ್ಲಿ ವೆನ್‌ಲಾಕ್ ಆಸ್ಪತ್ರೆ ಹಾಗೂ 5 ಕೋಟಿರೂ. ವೆಚ್ಚದಲ್ಲಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ವಿವಿಧ ಸೌಕರ್ಯಗಳು ಸೇರ್ಪಡೆಯಾಗಲಿವೆ.

ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಲಹಾ ವೇದಿಕೆ ಸಭೆಯಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ಮುಹಮ್ಮದ್ ನರಿುೀರ್ ಈ ಕುರಿತು ಮಾಹಿತಿ ನೀಡಿದರು.

ವೆನ್ಲಾಕ್ ಆಸ್ಪತ್ರೆಯಲ್ಲಿ 30 ಬೆಡ್‌ಗಳ ಐಸಿಯು, 100 ಶಸ್ತ್ರಕ್ರಿಯೆ ಬಳಿಕದ ಹಾಸಿಗೆಗಳು ಹಾಗೂ ಇತರ ಮೂಲಭೂತ ಸೌಕರ್ಯಗಳನ್ನು ಪ್ರಸ್ತಾಪಿಸಲಾಗಿದೆ. ವೆನ್‌ಲಾಕ್‌ನ ಹಳೆ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಸಂಪರ್ಕ ವ್ಯವಸ್ಥೆ, ಮಿಲಾಗ್ರಿಸ್‌ನಿಂದ ಮಸೀದಿಗೆ ಹೋಗುವ ರಸ್ತೆಯನ್ನು ಅಗಲ ಮಾಡಿ, ಮಂಗಳೂರು ಕೇಂದ್ರ ರೈಲ್ವೇ ನಿಲ್ದಾಣದಿಂದ ವೆನ್‌ಲಾಕ್‌ನ ಮಕ್ಕಳ ಆಸ್ಪತ್ರೆಯಿಂದ ಬರುವ ರಸ್ತೆಯನ್ನು ಮುಚ್ಚುವ ಪ್ರಸ್ತಾವ ನೆಯೂ ಈ ಯೋಜನೆಯಲ್ಲಿದೆ. ಇದೇ ವೇಳೆ ಲೇಡಿಗೋಶನ್ ಆಸ್ಪತ್ರೆಯ ನೂತನ ಕಟ್ಟಡದಲ್ಲಿ ಮತ್ತೊಂದು ಬ್ಲಾಕ್ ಸೇರ್ಪಡೆಗೊಳಿಸುವ ಪ್ರಸ್ತಾನೆಯಿದೆ ಎಂದು ಅವರು ಹೇಳಿದರು.

6 ಕೋಟಿ ರೂ. ವೆಚ್ಚದಲ್ಲಿ ಅಂಡರ್‌ಪಾಸ್!

ನಗರದ ಮಿನಿ ವಿಧಾನ ಸೌಧದ ಎದುರಿನಿಂದ ಗಾಂಧಿ ಪಾರ್ಕ್‌ಗೆ 10.5 ಅಡಿ ಅಗಲದ ಅಂಡರ್‌ಪಾಸನ್ನು 6 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು. ಈ ಯೋಜನೆಯಡಿ ಪಾರ್ಕ್ ಕೂಡಾ ಅಭಿವೃದ್ಧಿಯಾಗಲಿದ್ದು, ಇಲ್ಲಿ ಬಯಲು ರಂಗಮಂದಿರವನ್ನು ನಿರ್ಮಿಸುವ ಪ್ರಸ್ತಾವನೆ ಇದೆ ಎಂದು ಮುಹಮ್ಮದ್ ನಝೀರ್ ಸಭೆಯಲ್ಲಿ ತಿಳಿಸಿದರು.

ಹಂಪನ್‌ಕಟ್ಟ ಜಂಕ್ಷನ್‌ನಲ್ಲಿ ಮಲ್ಟಿಲೆವೆಲ್ ಕಾರು ಪಾರ್ಕಿಂಗ್

ಹಂಪನ್‌ಕಟ್ಟ ಜಂಕ್ಷನ್‌ನಲ್ಲಿ ಮಲ್ಟಿಲೆವೆಲ್ ಕಾರು ಪಾರ್ಕಿಂಗ್ ವ್ಯವಸ್ಥೆಯೂ ಸ್ಮಾರ್ಟ್ ಸಿಟಿ ಯೋಜನೆಯಡಿ ಜೋಡಿಸಲಾಗಿದೆ. ಪ್ರಸ್ತುತ ಅಲ್ಲಿರುವ ಐದು ಕಟ್ಟಡಗಳನ್ನು ಸೇರಿಸಿಕೊಂಡು ಈ ಪಾರ್ಕಿಂಗ್ ವ್ಯವಸ್ಥೆ ಆಗಲಿದೆ. ಐದು ಕಟ್ಟಡಗಳಲ್ಲಿ 22 ಆಸ್ತಿಗಳಿವೆ. ಈ ಬಗ್ಗೆ ಮಹಾನಗರ ಪಾಲಿಕೆ ಜತೆ ಎಂಒಯುಗೆ ಸಿದ್ಧತೆ ನಡೆಸಲಾಗಿದೆ. ಅಲ್ಲಿರುವ ಕಟ್ಟಡಗಳಿಗೆ ಸಂಬಂಧಿಸಿ 200 ಕಾರುಗಳು ಹಾಗೂ ಇತರ 200 ಕಾರುಗಳಿಗೆ ತಂಗಲು ಈ ಕಾರು ಪಾರ್ಕಿಂಗ್‌ನಲ್ಲಿ ಅವಕಾಶವಾಗಲಿದೆ. ಅದಲ್ಲದೆ ಸುಮಾರು 200 ರಷ್ಟು ದ್ವಿಚಕ್ರ ವಾಹನಗಳು ತಂಗಲು ಅವಕಾಶ ಲಭ್ಯವಾಗಲಿದೆ ಎಂದು ಅವರು ಹೇಳಿದರು.

20 ಬಸ್ಸು ನಿಲ್ದಾಣಗಳು

ಸ್ಮಾರ್ಟ್ ಸಿಟಿಯಡಿ ನಗರದಲ್ಲಿ 20 ಸುಸಜ್ಜಿತ ಬಸ್ಸು ನಿಲ್ದಾಣಗಳು ಮೂರು ಮಾದರಿಯಲ್ಲಿ ನಿರ್ಮಾಣವಾಗಲಿವೆ. ಎ ಮಾದರಿಯಡಿ 21 ಲಕ್ಷ ರೂ. ವೆಚ್ಚದಲ್ಲಿ ಇ- ಶೌಚಾಲಯದೊಂದಿಗೆ ನಿರ್ಮಾಣವಾಗಲಿದ್ದು, ಬಿ ಮಾದರಿಯಡಿ 15 ಲಕ್ಷ ರೂ. ವೆಚ್ಚ ಹಾಗೂ ಸಿ ಮಾದರಿಯಡಿ 12 ಲಕ್ಷ ರೂ. ವೆಚ್ಚದಲ್ಲಿ ಬಸ್ಸು ನಿಲ್ದಾಣಗಳು ನಿರ್ಮಾಣವಾಗಲಿವೆ. ಈಗಾಗಲೇ 17 ಬಸ್ಸು ನಿಲ್ದಾಣಗಳ ಪ್ರಕ್ರಿಯೆ ಭೌತಿಕವಾಗಿ ಪೂರ್ಣವಾಗಿವೆ. ಸರ್ಕ್ಯೂಟ್ ಹೌಸ್, ಶಕ್ತಿನಗರ ಹಾಗೂ ಪಚ್ಚನಾಡಿಯಲ್ಲಿ ನಿರ್ಮಾಣವಾಗಲಿರುವ ಬಸ್ಸು ನಿಲ್ದಾಣಗಳು ಇ ಶೌಚಾಲಯಗಳನ್ನು ಹೊಂದಲಿದೆ ಎಂದು ಅವರು ಹೇಳಿದರು.

ಮನಪಾ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಕ್ರೈಡೆಯ್ ಅಧ್ಯಕ್ಷ ಡಿ.ಬಿ. ಮೆಹ್ತಾ ಮೊದಲಾದವರು ಉಪಸ್ಥಿತರಿದ್ದರು.

ಪಂಪ್‌ವೆಲ್‌ನಲ್ಲೇ ಸುಸಜ್ಜಿತ ಬಸ್ಸು ನಿಲ್ದಾಣ!

ಸುಸಜ್ಜಿತ ಸರ್ವಿಸ್ ಬಸ್ಸು ನಿಲ್ದಾಣವನ್ನು ಇದೀಗ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿದ್ದು, ಈ ಹಿಂದೆ ನಿಗದಿಪಡಿಸಿರುವಂತೆ ಪಂಪ್‌ವೆಲ್‌ನಲ್ಲಿ ಈಗಾಗಲೇ ಸ್ವಾಧೀನಪಡಿಸಿರುವ 7 ಎಕರೆ ಜಾಗದಲ್ಲೇ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ನಝೀರ್ ತಿಳಿಸಿದರು.

ಈಗಿರುವ ಹಳೆ ಸರ್ವಿಸ್ ಬಸ್ಸು ನಿಲ್ದಾಣ, ಸಿಟಿ ಬಸ್ಸು ನಿಲ್ದಾಣವಾಗಿ ಪರಿವರ್ತನೆಗೊಳ್ಳಲಿದೆ. ಸ್ಟೇಟ್‌ಬ್ಯಾಂಕ್ ಸಮೀಪದಲ್ಲಿ ನಿಲುಗಡೆಯಾಗುವ ಸಿಟಿ ಬಸ್ಸುಗಳು ಈ ಬಸ್ಸು ನಿಲ್ದಾಣದಲ್ಲಿ ತಂಗಲಿವೆ ಎಂದು ವುುಹಮ್ಮದ್ ನಝೀರ್ ವಿವರಿಸಿದರು.

ಈ ಹಿಂದೆ ಪಂಪ್‌ವೆಲ್‌ನಲ್ಲಿ ನಿರ್ಮಿಸಲುದ್ದೇಶಿಸಲಾಗಿದ್ದ ಸರ್ವಿಸ್ ಬಸ್ಸು ನಿಲ್ದಾಣವನ್ನು ಪಡೀಲ್‌ಗೆ ಸ್ಥಳಾಂತರಿಸಲು ಕೆಲ ಸಮಯದ ಹಿಂದೆ ನಿರ್ಧರಿಸಲಾಗಿತ್ತು. ಇದೀಗ ಮತ್ತೆ ಪಂಪ್‌ವೆಲ್‌ನಲ್ಲಿಯೇ ಸುಸಜ್ಜಿತ ಸರ್ವಿಸ್ ಬಸ್ಸು ನಿಲ್ದಾಣ 445 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News