ಎನ್‌ಎಸ್‌ಜಿ ಮುಖ್ಯಸ್ಥರಾಗಿ ಅನೂಪ್ ಕುಮಾರ್ ಸಿಂಗ್ ನೇಮಕ

Update: 2019-10-19 17:59 GMT

 ಹೊಸದಿಲ್ಲಿ, ಅ.19: ಗುಜರಾತ್ ಪದವೃಂದದ ಐಪಿಎಸ್ ಅಧಿಕಾರಿ ಅನೂಪ್ ಕುಮಾರ್ ಸಿಂಗ್‌ರನ್ನು ನ್ಯಾಷನಲ್ ಸೆಕ್ಯುರಿಟಿ ಗಾರ್ಡ್(ಎನ್‌ಎಸ್‌ಜಿ)ನ ಪ್ರಧಾನ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.

  ಪ್ರಧಾನ ಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ನೇಮಕಾತಿ ಸಮಿತಿ ಸಭೆಯಲ್ಲಿ ಸಿಂಗ್ ನೇಮಕಕ್ಕೆ ಅನುಮೋದನೆ ದೊರಕಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ. 1985ರ ಪದವೃಂದದ ಐಪಿಎಸ್ ಅಧಿಕಾರಿಯಾಗಿರುವ ಸಿಂಗ್ ಈಗ ಅಹ್ಮದಾಬಾದ್ ಪೊಲೀಸ್ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಐಪಿಎಸ್ ಅಧಿಕಾರಿ ಅನೂಪ್‌ಕುಮಾರ್ ಸಿಂಗ್‌ರನ್ನು ಎನ್‌ಎಸ್‌ಜಿ ಮುಖ್ಯಸ್ಥರನ್ನಾಗಿ ನೇಮಿಸುವ ಗೃಹ ಸಚಿವಾಲಯದ ಪ್ರಸ್ತಾವನೆಗೆ ಸಂಪುಟದ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ. ಅವರು ಅಧಿಕಾರ ಸ್ವೀಕರಿಸಿದ ದಿನದಿಂದ 2020ರ ಸೆಪ್ಟೆಂಬರ್ 30ರವರೆಗೆ ,(ಅಥವಾ ಮುಂದಿನ ಆದೇಶದವರೆಗೆ ಯಾವುದು ಮೊದಲೋ ಆ ಅವಧಿಯವರೆಗೆ) ಅವರ ಸೇವಾವಧಿ ಇರುತ್ತದೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಆದೇಶದಲ್ಲಿ ತಿಳಿಸಲಾಗಿದೆ.

 ಎನ್‌ಎಸ್‌ಜಿ ಮುಖ್ಯಸ್ಥರಾಗಿದ್ದ ಸುದೀಪ್ ಲಖಟಿಕ 2 ತಿಂಗಳ ಹಿಂದೆ ನಿವೃತ್ತರಾದಂದಿನಿಂದ ಈ ಹುದ್ದೆ ತೆರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News