ವಿದ್ಯಾರ್ಥಿಗಳ ಪತ್ರಕ್ಕೆ ಸ್ಪಂದಿಸಿದ ಎಸ್ಸೆಸ್ಸೆಫ್ ಉಪ್ಪಿನಂಗಡಿ ಡಿವಿಶನ್: ಪಾದಚಾರಿ ರಸ್ತೆಯಲ್ಲಿ ಸ್ವಚ್ಚತಾ ಕಾರ್ಯ

Update: 2019-10-19 18:03 GMT

ಉಪ್ಪಿನಂಗಡಿ,ಅ19: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಪಾದಚಾರಿ ದಾರಿಯ ಬಗ್ಗೆ ಬರೆದ ಬೇಡಿಕೆಯ ಪತ್ರ ಎರಡು ದಿನಗಳ ಮೊದಲು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ವಿದ್ಯಾರ್ಥಿಗಳ ಪತ್ರಕ್ಕೆ ಎಸ್ಸೆಸ್ಸೆಫ್ ಉಪ್ಪಿನಂಗಡಿ ಡಿವಿಶನ್ ಕಾರ್ಯಕರ್ತರು ಸ್ಪಂದಿಸಿ, ಪಾದಚಾರಿ ರಸ್ತೆಯಲ್ಲಿ ಸ್ವಚ್ಚತಾ ಕಾರ್ಯ ನಡೆಸಿದರು.

'ಉಪ್ಪಿನಂಗಡಿಯ ಪೇಟೆಯಿಂದ ಸರಕಾರಿ ಕಾಲೇಜು ತನಕ ನಡೆದುಕೊಂಡು ಹೋಗುವಾಗ ಗಾಂಧಿಪಾರ್ಕ್ ಬಳಿಯಿಂದ ಹಿರೆಬಂಡಾಡಿ ರಸ್ತೆ ತಿರುವಿನ ತನಕ ಬಹಳ ಕಷ್ಟ ಪಟ್ಟು ನಡೆಯಬೇಕಾಗುತ್ತದೆ. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ನಡೆಯುವ ಪಾದಚಾರಿ ದಾರಿಯು ಹುಲ್ಲುಪೊದೆಗಳಿಂದ ತುಂಬಿದ್ದು, ಪಾದಚಾರಿ ದಾರಿಯಲ್ಲಿ ನಡೆಯಲು ಸಾಧ್ಯವಿಲ್ಲ. ನಮ್ಮ ಶಾಲಾ ಮಕ್ಕಳು, ಸೈಂಟ್ ಮೇರೀಸ್ ವಿದ್ಯಾ ಸಂಸ್ಥೆಯ ಸಣ್ಣ ಸಣ್ಣ ಮಕ್ಕಳು ಕಿರಿದಾದ ಹುಲ್ಲುಗಳಿಂದಾವೃತವಾದ ಪಾದಚಾರಿ ದಾರಿಯಲ್ಲಿ ನಡೆಯಲು ಪರದಾಡಬೇಕಾಗುತ್ತದೆ. ಉಪ್ಪಿನಂಗಡಿ ಜಂಕ್ಷನ್ ನಲ್ಲಿ ಸ್ವಚ್ಚತೆಗಾಗಿ ಮುಂಬರುವ ಸಂಘ ಸಂಸ್ಥೆಗಳು ದಯವಿಟ್ಟು ಇತ್ತ ಗಮನಿಸಿ' ಎಂಬ ವಿದ್ಯಾರ್ಥಿಗಳ ಪತ್ರ ವೈರಲ್ ಆಗಿತ್ತು. ಇದಕ್ಕೆ ಸ್ಪಂದಿಸಿದ ಎಸ್ಸೆಸ್ಸೆಫ್ ಉಪ್ಪಿನಂಗಡಿ ಡಿವಿಷನ್, ಇಂದು ಪ್ರಾಯೋಗಿಕವಾಗಿ ಪಾದಚಾರಿ ದಾರಿಯಲ್ಲಿ ಸ್ವಚ್ಛತಾ ಕಾರ್ಯ ಮಾಡುವ ಮೂಲಕ ಗಮನ ಸೆಳೆಯಿತು.

ಸ್ವಚ್ಚತಾ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಉಪ್ಪಿನಂಗಡಿ ಡಿವಿಷನ್ ಸಮಿತಿ ನಾಯಕರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News