ಪರಿಸ್ಥಿತಿ ಸುಧಾರಿಸುವ ವರೆಗೆ ಕಾಶ್ಮೀರದಲ್ಲಿ ಪ್ರತಿಭಟನೆಗೆ ಅವಕಾಶ ಇಲ್ಲ: ಪೊಲೀಸ್ ವರಿಷ್ಠ ದಿಲ್ಬಾಘ್ ಸಿಂಗ್

Update: 2019-10-19 18:04 GMT

ಶ್ರೀನಗರ, ಅ. 19: ನಿರ್ಬಂಧವನ್ನು ಸಂಪೂರ್ಣ ಹಿಂದೆ ತೆಗೆಯುವ ವರೆಗೆ ಹಾಗೂ ಪರಿಸ್ಥಿತಿ ಸುಧಾರಿಸುವ ವರೆಗೆ ಜಮ್ಮು ಹಾಗೂ ಕಾಶ್ಮೀರದಲ್ಲಿ ಧರಣಿ ಸಹಿತ ಯಾವುದೇ ರೀತಿಯ ಪ್ರತಿಭಟನೆಗೆ ಅವಕಾಶ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

   ಜಮ್ಮು ಹಾಗೂ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವುದನ್ನು ವಿರೋಧಿಸಿ ಧರಣಿ ನಡೆಸಿದ್ದ ಜಮ್ಮು ಹಾಗೂ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರ ಸಹೋದರಿ ಹಾಗೂ ಪುತ್ರಿ ಸಹಿತ 12ಕ್ಕೂ ಅಧಿಕ ಮಹಿಳೆಯರನ್ನು ಬಂಧಿಸಲಾಗಿತ್ತು. 60ರಿಂದ 80 ವರ್ಷಗಳ ನಡುವಿನ ಪ್ರಾಯದ ಈ ಶಿಕ್ಷಣ ತಜ್ಞರು ಹಾಗೂ ಹೋರಾಟಗಾರ್ತಿಯರನ್ನು ವೈಯಕ್ತಿಕ ಬಾಂಡ್ ಮೇಲೆ ಬಿಡುಗಡೆ ಮಾಡಲಾಗಿತ್ತು.

ಶಾಂತಿ ಸ್ಥಾಪನೆ ನಮ್ಮ ಮೊದಲ ಪ್ರಯತ್ನ. ಅದಕ್ಕಿಂತ ಮೊದಲು ಯಾವುದೇ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ ಎಂದು ಜಮ್ಮು ಹಾಗೂ ಕಾಶ್ಮೀರದ ಪೊಲೀಸ್ ವರಿಷ್ಠ ದಿಲ್ಭಾಗ್ ಸಿಂಗ್ ಹೇಳಿದ್ದಾರೆ.

  ಜಮ್ಮು ಹಾಗೂ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವುದನ್ನು ವಿರೋಧಿಸಿ ನಡೆಸಿದ ಪ್ರತಿಭಟನೆಯಲ್ಲಿ ಫಾರೂಕ್ ಅಬ್ದುಲ್ಲಾ ಅವರ ಸಹೋದರಿ ಸುರಯ್ಯಾ ಅಬ್ದುಲ್ಲಾ, ಪುತ್ರಿ ಸಫಿಯಾ ಅಬ್ದುಲ್ ಖಾನ್ ಹಾಗೂ ಜಮ್ಮುಕಾಶ್ಮೀರದ ಮಾಜಿ ಮುಖ್ಯ ನ್ಯಾಯಮೂರ್ತಿ ಬಷೀರ್ ಅಹ್ಮದ್ ಖಾನ್ ಅವರ ಪತ್ನಿ ಹವಾ ಬಷೀರ್ ಮೊದಲಾದವರು ಪಾಲ್ಗೊಂಡಿದ್ದರು. ಪ್ರದರ್ಶನಾ ಫಲಕಗಳನ್ನು ಹಿಡಿದುಕೊಂಡ ಮಹಿಳೆಯರು ಶ್ರೀನಗರದ ಲಾಲ್ ಚೌಕ್‌ನ ಪ್ರತಾಪ್ ಪಾರ್ಕ್‌ನಲ್ಲಿ ಸೇರಿದರು ಹಾಗೂ ಶಾಂತಿಯುತ ಧರಣಿ ನಡೆಸಿದರು. ಧರಣಿ ಆರಂಭಿಸುತ್ತಿದ್ದಂತೆ ಪೊಲೀಸರು ಅವರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ತೆಗೆದುಕೊಂಡರು. ಅನಂತರ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು.

ಮಾತನಾಡುವ ಪದಗಳ ಮೂಲಕ ಮಾತ್ರ ಪ್ರಚೋದನೆ ಉಂಟಾಗುವುದಿಲ್ಲ. ಕೊಂಡೊಯ್ಯುವ ಪ್ರದರ್ಶನಾ ಫಲಕಗಳಿಂದ ಕೂಡ ಪ್ರಚೋದನೆ ಉಂಟಾಗುತ್ತದೆ ಎಂದು ಸಿಂಗ್ ಹೇಳಿದ್ದಾರೆ.

ಶ್ರೀನಗರದಲ್ಲಿ ವಿಧಿಸಲಾಗಿರುವ ನಿರ್ಬಂಧವನ್ನು ಗೌರವಿಸಬೇಕು ಎಂದು ಸಿಂಗ್ ಹೇಳಿದರು. ಮಹಿಳಾ ಪ್ರತಿಭಟನಕಾರರು ಉಪ ಆಯುಕ್ತರಲ್ಲಿ ತೆರಳಿ ಅನುಮತಿ ಕೋರಬೇಕು ಎಂದು ಅವರು ಸಲಹೇ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News