​ಸಮಸ್ಯೆ ಇತ್ಯರ್ಥಪಡಿಸದಿದ್ದರೆ ಹೋರಾಟ ಮುಂದುವರಿಕೆ: ಕಸಬಾ ಬೆಂಗರೆ ಶಾಲೆಯ ಎಸ್‌ಡಿಎಂಸಿ ಎಚ್ಚರಿಕೆ

Update: 2019-10-21 12:51 GMT

ಮಂಗಳೂರು, ಅ.21: ಕಸಬಾ ಬೆಂಗರೆಯ ಐವರು ಶಿಕ್ಷಕರನ್ನು ವರ್ಗಾವಣೆಗೊಳಿಸಿದ ಶಿಕ್ಷಣ ಇಲಾಖೆಯ ಕ್ರಮವನ್ನು ಖಂಡಿಸಿ ಕಳೆದ ವಾರ ವಿದ್ಯಾರ್ಥಿಗಳ ಜೊತೆಗೂಡಿ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದ ಶಾಲಾಭಿವೃದ್ಧಿ ಸಮಿತಿಯ ಮುಖಂಡರು ಸೋಮವಾರ ಶಾಲೆಯಲ್ಲಿ ಸಭೆ ಸೇರಿ ಸಮಸ್ಯೆಯನ್ನು ಹಿರಿಯ ಅಧಿಕಾರಿಗಳು ಇತ್ಯರ್ಥಪಡಿಸದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

ಡಿಡಿಪಿಐ ನಿಯೋಜಿತ ಸಿಆರ್‌ಪಿಯಿಂದ ತರಗತಿ, ಫೆಬ್ರವರಿಯಲ್ಲಿ ಖಾಯಂ ಆಗಿ 5 ಸಹ ಶಿಕ್ಷಕರು, 1 ಮುಖ್ಯ ಶಿಕ್ಷಕಿ, 1 ದೈಹಿಕ ಶಿಕ್ಷಕರ ನೇಮಕಾತಿ ಮಾಡುವ ಬಗ್ಗೆ ಡಿಡಿಪಿಐ ಭರವಸೆ ನೀಡಿದ್ದರು. ಅದರಂತೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಬಿಎಡ್ ಪದವೀಧರ ಅತಿಥಿ ಶಿಕ್ಷಕರನ್ನು ನೇಮಿಸಬೇಕು, ಅತಿಥಿ ಶಿಕ್ಷಕರ ನೇಮಕವಾಗದೆ ಶಿಕ್ಷಕರ ವರ್ಗಾವಣೆ ಮಾಡಬಾರದು ಎಂದು ನಿರ್ಣಯ ಕೈಗೊಳ್ಳಲಾಯಿತು.

ಡಿಡಿಪಿಐ ನಿಡಿದ ಭರವಸೆಯನ್ನು ಈಡೇರಿಸದಿದ್ದರೆ ವಿದ್ಯಾರ್ಥಿ, ಪೋಷಕರ ಜೊತೆ ಸೇರಿ ನವೆಂಬರ್ 1ರಿಂದ ಅನಿರ್ಧಿಷ್ಟಾವಧಿ ಧರಣಿ ನಡೆಸಲು ಸಭೆ ತೀರ್ಮಾನಿಸಿದೆ. ಸಭೆಯಲ್ಲಿ ಡಿವೈಎಫ್‌ಐ ದ.ಕ. ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಜಿಲ್ಲಾ ಸಮಿತಿಯ ಸದಸ್ಯ ಎ.ಬಿ. ನೌಶಾದ್, ಎಸ್‌ಡಿಎಂಸಿ ಅಧ್ಯಕ್ಷೆ ಕೈರುನ್ನೀಸಾ, ಸದಸ್ಯರಾದ ಸಜಿನಾ, ರಿಝ್ವಾನ್, ಯಾಸ್ಮಿನ್, ಸಾಜಿದಾ, ಮುಮ್ತಾಝ್, ನೂರ್‌ಜಹಾನ್, ರೆಹನಾ, ರಮ್ಲತ್, ಝೀನತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News