ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಎಸ್ಮೋ ಮಾನ್ಯತೆ

Update: 2019-10-21 13:46 GMT

ಮಣಿಪಾಲ, ಅ.21: ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರಕ್ಕೆ (ಎಂಸಿಸಿಸಿ) ಯುರೋಪಿಯನ್ ಸೊಸೈಟಿ ಆಫ್ ಮೆಡಿಕಲ್ ಆಂಕೊಲಜಿ (ಇಎಸ್‌ಎಂಒ) ವತಿಯಿಂದ ಎಸ್ಮೋ ಆಂಕೊಲಜಿ ಮತ್ತು ಪ್ರಶಾಮಕ ಆರೈಕೆಯ ಕೇಂದ್ರವಾಗಿ ಮಾನ್ಯತೆ ಲಭಿಸಿದೆ.

ಕೆಎಂಸಿಯ ವೈದ್ಯಕೀಯ ಆಂಕೊಲಜಿ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ.ಕಾರ್ತಿಕ ಉಡುಪ ಅವರು ಸ್ಪೇನ್‌ನ ಬಾರ್ಸಿಲೋನಾದಲ್ಲಿ ನಡೆದ ಎಸ್ಮೋ-2019’ರ ಸಮಾವೇಶದಲ್ಲಿ ಈ ಮಾನ್ಯತೆಯನ್ನು ಪಡೆದರು.

ಈ ಮಾನ್ಯತೆಯು 2020ರ ಜನವರಿ 22ರಿಂದ 2022ರ ಡಿಸೆಂಬರ್ 22ರವರೆಗೆ ಮೂರು ವರ್ಷಗಳ ಅವಧಿಗೆ ಇರುತ್ತದೆ. ಜಗತ್ತಿನಾದ್ಯಂತ ಒಟ್ಟು ಪ್ರಮುಖ 21 ಕ್ಯಾನ್ಸರ್ ಕೇಂದ್ರಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇವುಗಳಲ್ಲಿ ಕೇವಲ ಎರಡು ಕ್ಯಾನ್ಸರ್ ಕೇಂದ್ರಗಳು ಭಾರತದಿಂದ ಆಯ್ಕೆಯಾಗಿವೆ. ಇದರಲ್ಲಿ ಮಣಿಪಾಲದ ಎಂಸಿಸಿಸಿಯೂ ಒಂದು.

ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದಲ್ಲಿ ಹೆಚ್ಚು ತರಬೇತಿ ಪಡೆದ ಹಾಗೂ ನುರಿತ ಕ್ಯಾನ್ಸರ್ ತಜ್ಞರ ತಂಡವಿದ್ದು, ಈ ಪ್ರಶಸ್ತಿ ಅದಕ್ಕೆ ಸಿಕ್ಕಿದ ಅತಿ ದೊಡ್ಡ ಗೌರವವಾಗಿದೆ. ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರ, ವೈದ್ಯಕೀಯ ಆಂಕೊಲಜಿ, ಶಸ್ತ್ರಚಿಕಿತ್ಸಾ ಆಂಕೊಲಜಿ, ವಿಕಿರಣಶಾಸ್ತ್ರ ಅಂಕೊಲಜಿ, ಮಕ್ಕಳ ಆಂಕೊಲಜಿ, ಪ್ರಶಾಮಕ ವಿಭಾಗ ಮತ್ತು ನ್ಯೂಕ್ಲಿಯರ್ ಮೆಡಿಸಿನ್ ವಿಭಾಗಗಳನ್ನು ಹೊಂದಿದೆ. ಇದು ಎರಡನೇ ಅಭಿಪ್ರಾಯ ಚಿಕಿತ್ಸಾಲಯ, ಅಂಕೊ-ರೋಗಶಾಸ್ತ್ರ ಮತ್ತು ಅಂಕೊ-ವಿಕಿರಣಶಾಸ್ತ್ರ ಸೇವೆಗಳನ್ನು ಹೊಂದಿದೆ.

ಎಸ್ಮೋ ಮಾನ್ಯತೆಯಿಂದ ಮಣಿಪಾಲಕ್ಕೆ ಅಂತಾರಾಷ್ಟ್ರೀಯ ಎಸ್ಮೊ ಗುಂಪಿನ ಭಾಗವಾಗಿರಲು ಸಾದ್ಯವಾಗಲಿದೆ. ಇದರಿಂದ ಕ್ಯಾನ್ಸರ್ ತಜ್ಞರಿಗೆ ಕ್ಯಾನ್ಸರ್ ಮಾರ್ಗಸೂಚಿಗಳ ರಚನೆ, ಪ್ರಶಾಮಕ ಆರೈಕೆಗಾಗಿ ಕನಿಷ್ಠ ಮಾನದಂಡ ಮತ್ತು ಗುಣಮಟ್ಟದ ಕ್ಯಾನ್ಸರ್ ಆರೈಕೆಗಾಗಿ ಮಣಿಪಾಲ ಅಂತಾರಾಷ್ಟ್ರೀಯ ಎಸ್ಮೋಗಳ ಭಾಗವಾಗಲು ಸಹಾಯ ಮಾಡುತ್ತದೆ ಎಂದು ಕೆಎಂಸಿಯ ಮೆಡಿಕಲ್ ಸೂಪರಿಂಟೆಂಡೆಂಟ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News