ಮೆಸ್ಕಾಂನಿಂದ 667 ಕಿರಿಯ ಪವರ್‌ಮ್ಯಾನ್ ಹುದ್ದೆಗಳಿಗೆ ನೇಮಕಾತಿ

Update: 2019-10-21 14:11 GMT

ಉಡುಪಿ, ಅ.21: ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ನಿಯಮಿತ(ಮೆಸ್ಕಾಂ) ಇದರ ಕಿರಿಯ ಪವರ್‌ಮ್ಯಾನ್ ಹುದ್ದೆಗಳ ನೇಮಕಾತಿಗಾಗಿ ಎರಡು ದಿನಗಳ ಅಭ್ಯರ್ಥಿಗಳ ಸಹನಾ ಶಕ್ತಿ ಪರೀಕ್ಷೆ ಇಂದು ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಆರಂಭಗೊಂಡಿದ್ದು, ಈ ಮೂಲಕ ಉಡುಪಿ ಜಿಲ್ಲೆ ಯಲ್ಲಿರುವ ಕಿರಿಯ ಪವರ್‌ಮ್ಯಾನ್‌ಗಳ ಸಮಸ್ಯೆಗೆ ಪರಿಹಾರ ದೊರಕಲಿದೆ.

ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ಜಿಲ್ಲೆಗಳನ್ನೊಳಗೊಂಡ ಮೆಸ್ಕಾಂನಲ್ಲಿ ಒಟ್ಟು 667 ಕಿರಿಯ ಪವರ್‌ಮ್ಯಾನ್ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಬಂದ ಅರ್ಜಿಗಳ ಪೈಕಿ 1096 ಅಭ್ಯರ್ಥಿಗಳ ಸಹನಾ ಶಕ್ತಿ ಪರೀಕ್ಷೆಯನ್ನು ಉಡುಪಿಯಲ್ಲಿ ಆಯೋಜಿಸಲಾಗಿದೆ. ಮೊದಲನೆ ದಿನವಾದ ಇಂದು 548 ಮತ್ತು ಎರಡನೆ ದಿನವಾದ ಮಂಗಳವಾರ 542 ಮಂದಿಯ ಪರೀಕ್ಷೆ ನಡೆಯಲಿದೆ.

2015ರಲ್ಲಿ ಇದೇ ಹುದ್ದೆಗಳಿಗಾಗಿ ನೇಮಕಾತಿ ನಡೆದಿದ್ದು, ಆ ಸಂದರ್ಭ ದಲ್ಲಿ ಉಡುಪಿ ಜಿಲ್ಲೆಗೆ ಆಯ್ಕೆಯಾದ ಕಿರಿಯ ಪವರ್‌ಮ್ಯಾನ್‌ಗಳು ರಾಜೀ ನಾಮೆ, ಭಡ್ತಿ ಪಡೆದು ಹೋದ ಹಿನ್ನೆಲೆಯಲ್ಲಿ 185 ಹುದ್ದೆಗಳು ಖಾಲಿ ಯಾಗಿದ್ದವು. ಇದೀಗ ಈಗ ನಡೆಯುತ್ತಿರುವ ನೇಮಕಾತಿಯಿಂದ ಈ ಹುದ್ದೆಗಳು ತುಂಬಿ ಜಿಲ್ಲೆಯಲ್ಲಿನ ಕಿರಿಯ ಪವರ್‌ಮ್ಯಾನ್‌ಗಳ ಕೊರತೆ ನೀಗಲಿದೆ.

ಐದು ಹಂತದ ಪರೀಕ್ಷೆ: ಈ ಹುದ್ದೆಗಾಗಿ ಎಸೆಸೆಲ್ಸಿ ಕನಿಷ್ಠ ವಿದ್ಯಾರ್ಹತೆ ಮತ್ತು ಶೇ.85ಕ್ಕಿಂತ ಹೆಚ್ಚು ಅಂಕ ಗಳಿಸಿದವರಿಂದ ಅರ್ಜಿಗಳನ್ನು ಆಹ್ವಾನಿಸ ಲಾಗಿದೆ. ಇದಕ್ಕೆ ಕೇವಲ ಎಸೆಸೆಲ್ಸಿ ಮಾತ್ರವಲ್ಲದೆ ಪಿಯುಸಿ, ಡಿಪ್ಲೋಮಾ, ಪದವಿ ವಿದ್ಯಾರ್ಥಿಗಳು ಕೂಡ ಅರ್ಜಿ ಸಲ್ಲಿಸಿದ್ದಾರೆ.
ಇಂದಿನ ಪರೀಕ್ಷೆಯಲ್ಲಿ ಅರ್ಜಿದಾರರ ದಾಖಲೆಗಳನ್ನು ಪರಿಶೀಲಿಸಿ, ನಂತರ ಮೊದಲ ಹಂತವಾದ ವಿದ್ಯುತ್ ಕಂಬ ಹತ್ತುವ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಉತ್ತೀರ್ಣರಾದವರು ಮುಂದಿನ ಸುತ್ತಿಗೆ ಅರ್ಹತೆ ಪಡೆಯುತ್ತಾರೆ. ಬಳಿಕ 100 ಮೀ. ಓಟ, 800ಮೀಟರ್ ಓಟ, ಸ್ಕಿಪ್ಪಿಂಗ್, ಶಾಟ್‌ಪುಟ್ ಪರೀಕ್ಷೆ ಯನ್ನು ನಡೆಸಲಾಗುತ್ತದೆ. ಇದರಲ್ಲಿ ಆಯ್ಕೆಯಾದವರ ಪಟ್ಟಿಯನ್ನು ತಯಾರಿಸಿ, ಅಂಕಗಳ ಪರಿಶೀಲನೆ ನಡೆಸಿ ಅಂತಿಮ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಸುಮಾರು ಎರಡು ಮೂರು ತಿಂಗಳುಗಳ ಕಾಲಾವಕಾಶ ಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ನೇಮಕಾತಿಯಲ್ಲಿ ಆಯ್ಕೆಯಾದ ಕಿರಿಯ ಪವರ್‌ಮ್ಯಾನ್‌ಗಳಿಗೆ ಮೊದಲ ವರ್ಷ 10000ರೂ., ಎರಡನೆ ವರ್ಷ 11000ರೂ. ಮತ್ತು ಮೂರನೆ ವರ್ಷ 12,000ರೂ. ವೇತನವನ್ನು ನೀಡಲಾಗುತ್ತದೆ. ಮೂರನೆ ವರ್ಷದಿಂದ ಅವರನ್ನು ಇಲಾಖೆಯ ಖಾಯಂ ನೌಕರರನ್ನಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ.

25 ಯುವತಿಯರು ಭಾಗಿ: ಉಡುಪಿಯಲ್ಲಿ ನಡೆದ ಸಹನಾ ಶಕ್ತಿ ಪರೀಕ್ಷೆ ಯಲ್ಲಿ ಭಾಗವಹಿಸಿರುವ 1096 ಅಭ್ಯರ್ಥಿಗಳ ಪೈಕಿ 25 ಮಹಿಳೆಯರಿದ್ದಾರೆ. ಇದರಲ್ಲಿ ಮೊದಲನೆ ದಿನ ಮೂವರು ಮಹಿಳೆಯರು ಮಾತ್ರ ಕಂಬ ಹತ್ತುವಲ್ಲಿ ಯಶಸ್ವಿಯಾಗಿದ್ದಾರೆ.
ಕಿರಿಯ ಪವರ್‌ಮ್ಯಾನ್ ಹುದ್ದೆಗಾಗಿ ಮಹಿಳೆಯರು ಪುರಷರೊಂದಿಗೆ ಸ್ಪರ್ಧಿಸಿ ಹುದ್ದೆ ಗಳಿಸಬೇಕಾಗಿದೆ. ಇದರಲ್ಲಿ ಮಹಿಳೆಯರಿಗೆ ಪ್ರತ್ಯೇಕ ಮೀಸಲಾತಿ ಇಲ್ಲ. ಪುರುಷರಿಗೆ ಏರ್ಪಡಿಸಲಾದ ಪರೀಕ್ಷೆಯನ್ನು ಮಹಿಳೆಯರು ಕೂಡ ಎದುರಿಸಬೇಕು. ಸದ್ಯ ಇದರಲ್ಲಿ ಮೂವರು ಮಹಿಳೆಯರು ಯಶಸ್ವಿಯಾಗಿದ್ದಾರೆ.

2015ರಲ್ಲಿ ನಡೆದ ಇದೇ ಹುದ್ದೆಗಾಗಿ ಮೆಸ್ಕಾಂನಲ್ಲಿ ನಡೆದ ಪರೀಕ್ಷೆಯಲ್ಲಿ ನಾಲ್ಕು ಮಂದಿ ಮಹಿಳೆಯರು ಮಾತ್ರ ಆಯ್ಕೆಯಾಗಿದ್ದರು. ಇದೀಗ ಮೂವರು ಮಹಿಳೆಯರು ಕ್ಷೇತ್ರದಲ್ಲಿ ಲೈನ್‌ವುಮೆನ್ ಆಗಿ ಉಡುಪಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಪರೀಕ್ಷೆ ಸಂದರ್ಭದಲ್ಲಿ ಮಂಗಳೂರು ಮೆಸ್ಕಾಂ ಮುಖ್ಯ ಆರ್ಥಿಕ ಅಧಿಕಾರಿ ಡಿ.ಆರ್.ಶ್ರೀನಿವಾಸ್, ಉಡುಪಿ ಮೆಸ್ಕಾಂ ಅಧೀಕ್ಷಕ ಅಭಿಯಂತರ ನರಸಿಂಹ ಪಂಡಿತ್, ಉಪಲೆಕ್ಕ ನಿಯಂತ್ರಣಾಧಿಕಾರಿ ಮಂಜುನಾಥ್ ಹಾಜರಿದ್ದು, 12 ಮಂದಿ ದೈಹಿಕ ಶಿಕ್ಷಣ ನಿರ್ದೇಶಕರು ಸೇರಿದಂತೆ ಉಡುಪಿ ಮೆಸ್ಕಾಂನ ಒಟ್ಟು 200 ಮಂದಿ ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ಆಯ್ಕೆ ಪಾರದರ್ಶಕವಾಗಿರಲು ಕ್ರೀಡಾಂಗಣದಲ್ಲಿ ಏಳು ಕ್ಯಾಮೆರಾಗಳನ್ನು ಆಳವಡಿಸಲಾಗಿದೆ.

2500 ಮಂದಿಗೆ ಉಚಿತ ಊಟದ ವ್ಯವಸ್ಥೆ
ಕಿರಿಯ ಪವರ್‌ಮೆನ್‌ಗಳ ನೇಮಕಾತಿ ಪರೀಕ್ಷೆ ಹಿನ್ನೆಲೆಯಲ್ಲಿ ಮೆಸ್ಕಾಂ ಸಹೋದ್ಯೋಗಿ ಸ್ನೇಹಿತರು, ವಿದ್ಯುತ್ ಸಂಚಾರಿ ಹಾಗೂ ಗುತ್ತಿಗೆದಾರರು ಕ್ರೀಡಾಂಗಣದಲ್ಲಿ ಉಚಿತ ಊಟದ ವ್ಯವಸ್ಥೆಯನ್ನು ಕಲ್ಪಿಸಿದ್ದರು.
2015ರಲ್ಲಿ ನಡೆದ ನೇಮಕಾತಿ ಪರೀಕ್ಷೆ ಸಂದರ್ಭದಲ್ಲಿ ಮೂರು ದಿನ 3000 ಮಂದಿಗೆ ಉಚಿತ ಊಟದ ವ್ಯವಸ್ಥೆ ಮಾಡಿದ್ದ ಇದೇ ತಂಡ ಇದೀಗ 2500 ಮಂದಿಗೆ ಊಟದ ವ್ಯವಸ್ಥೆಯನ್ನು ಮಾಡಿದೆ. ಇಂದು 1500 ಮಂದಿ ಮತ್ತು ನಾಳೆ 1000 ಮಂದಿಗೆ ಬೇಕಾದ ಅಡುಗೆ ಮಾಡಲಾಗಿದೆ. ಇದರಲ್ಲಿ ಅಭ್ಯರ್ಥಿಗಳು ಮಾತ್ರವಲ್ಲದೆ ಅವರೊಂದಿಗೆ ಬರುವ ಕುಟುಂಬದವರಿಗೂ ಊಟ ನೀಡುತ್ತಿದ್ದೇವೆ ಎಂದು ಪ್ರಾಯೋಜಕರಾದ ಮಣಿಪಾಲ ಮೆಸ್ಕಾಂ ಸಹಾಯಕ ಎಕ್ಸಿಕ್ಯೂಟಿವ್ ಇಂಜಿನಿಯರ್ ಎಂ.ಆರ್.ಕರಿಯಪ್ಪನವರ ತಿಳಿಸಿದ್ದಾರೆ.

ಉತ್ತರ ಕರ್ನಾಟಕದವರೇ ಅಧಿಕ
ಮೆಸ್ಕಾಂ ವ್ಯಾಪ್ತಿಯ ಕಿರಿಯ ಪವರ್‌ಮ್ಯಾನ್ ಹುದ್ದೆಗೆ ಅರ್ಜಿ ಸಲ್ಲಿಸಿದವರ ಪೈಕಿ ಉತ್ತರ ಕರ್ನಾಟಕದವರೇ ಹೆಚ್ಚು. ಆಸಕ್ತಿ ಇಲ್ಲದ ಕಾರಣ ಅವಿಭಜಿತ ದ.ಕ. ಜಿಲ್ಲೆಗಳಿಂದ ಹೆಚ್ಚು ಅರ್ಜಿಗಳು ಬಂದಿಲ್ಲ.
ಇಲ್ಲಿ ಕನಿಷ್ಠ ಶೇ.85ರಷ್ಟು ಅಂಕದೊಂದಿಗೆ ಎಸೆಸೆಲ್ಸಿ ವಿದ್ಯಾರ್ಹತೆ ಇರುವುದರಿಂದ ಜಿಲ್ಲೆಯವರು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಇಲ್ಲಿ ಎಸೆಸೆಲ್ಸಿಯಲ್ಲಿ ಶೇ.85ರಷ್ಟು ಅಂಕ ಗಳಿಸಿದವರು ಇಂಜಿನಿಯರ್, ವೈದ್ಯಕೀಯ ಸೇರಿದಂತೆ ಉನ್ನತ ಶಿಕ್ಷಣದತ್ತ ಹೋಗುತ್ತಾರೆಯೇ ಹೊರತು ಈ ರೀತಿಯ ಹುದ್ದೆಗಳಿಗೆ ಆಸಕ್ತಿ ತೋರುವುದಿಲ್ಲ ಎಂಬುದು ಅಧಿಕಾರಿಗಳ ಅಭಿಪ್ರಾಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News