ಪೊಲೀಸರು ಸಂವಿಧಾನದ ಆಶೋತ್ತರದಂತೆ ಕರ್ತವ್ಯ ನಿರ್ವಹಿಸುವುದು ಅಗತ್ಯ: ನ್ಯಾ.ಸಿ.ಎಂ.ಜೋಶಿ

Update: 2019-10-21 16:08 GMT

ಉಡುಪಿ, ಅ.21: ದೇಶದ ಜನರ ಹಾಗೂ ಸಮಾಜದ ಸ್ವಾಸ್ಥ್ಯ ಕಾಪಾಡುವ ಮಹತ್ತರವಾದ ಜವಾಬ್ದಾರಿ ಪೊಲೀಸರ ಮೇಲಿದೆ. ಆದುದರಿಂದ ಪೊಲೀಸರು ಸಂವಿಧಾನದ ಆಶೋತ್ತರಗಳನ್ನು ಗಮನದಲ್ಲಿಟ್ಟುಕೊಂಡು ಸಮಾಜವನ್ನು ಉತ್ತಮ ದಾರಿಯಲ್ಲಿ ಕೊಂಡೊಯ್ಯುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಚಂದ್ರಶೇಖರ್ ಎಂ. ಜೋಶಿ ಹೇಳಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕೇಂದ್ರದಲ್ಲಿ ಸೋಮವಾರ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮ ಪೊಲೀಸ್ ಪ್ರತಿಮೆಗೆ ಪುಷ್ಪಗುಚ್ಛ ಸಮರ್ಪಿಸಿ ಅವರು ಮಾತನಾಡುತ್ತಿದ್ದರು.

ಒಂದು ದೇಶದ ಆಂತರಿಕ ಸ್ವಾಸ್ಥ ಕಾಪಾಡುವ ಮತ್ತು ಹೊರಗಿನ ಸವಾಲುಗಳನ್ನು ಎದುರಿಸುವ ಜವಾಬ್ದಾರಿ ಬಹಳ ಮುಖ್ಯವಾಗಿದೆ. ಹೊರಗಿನ ಸವಾಲುಗಳನ್ನು ಸೈನ್ಯ ಎದುರಿಸಿದರೆ, ಒಳಗಿನ ಸ್ವಾಸ್ಥ್ಯವನ್ನು ಕಾಪಾಡುವ ಕೆಲಸ ಪೊಲೀಸರು ಮಾಡುತ್ತಾರೆ. ದೇಶದ ಒಳಗಿನ ಸವಾಲು ನಿಭಾಯಿಸಲು ವಿಫಲರಾದರೆ ಹೊರಗಿನ ಸವಾಲು ಎದುರಿಸಲು ಸಾಧ್ಯವಾಗುವುದಿಲ್ಲ. ಆದುದರಿಂದ ಸೈನ್ಯದಷ್ಟೆ ಪೊಲೀಸರ ಕರ್ತವ್ಯ ಕೂಡ ಪ್ರಾಮುಖ್ಯವಾಗಿದೆ ಎಂದರು.

ಪೊಲೀಸರು ಸಮಾಜದಲ್ಲಿರುವ ನ್ಯೂನತೆ ಸರಿಪಡಿಸಿ, ಘಾತುಕ ಶಕ್ತಿಗಳನ್ನು ಹತ್ತಿಕ್ಕಿ ಸರಿಯಾದ ದಾರಿಯಲ್ಲಿ ತೆಗೆದುಕೊಂಡು ಹೋಗಬೇಕಾಗಿದೆ. ಪೊಲೀಸರು ಒಳಗಿನ ಸ್ವಾಸ್ಥವನ್ನು ಕಾಪಾಡುವ ಜವಾಬ್ದಾರಿಯನ್ನು ಗಮನದಲ್ಲಿಟ್ಟುಕೊಂಡು ಕಾನೂನಿನಂತೆ ಕರ್ತವ್ಯ ನಿರ್ವಹಿಸಿದರೆ ದೇಶವನ್ನು ಮತ್ತೆ ಸಂವಿಧಾನದ ಆಶೋತ್ತರಗಳಿಗೆ ತಕ್ಕಂತೆ ಅಣಿಗೊಳಿಸಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಹಿಂದಿನ ಇತಿಹಾಸವನ್ನು ಅವಲೋಕಿಸಿದಾಗ ಪ್ರತಿವರ್ಷ ಹೊಸ ಹೊಸ ಸವಾಲುಗಳು ನಮ್ಮ ಮುಂದೆ ಬರುತ್ತವೆ. ಆದುದರಿಂದ ಪೊಲೀಸರು ಮುಂದಿನ ದಿನಗಳಲ್ಲಿ ಹೆಚ್ಚಿನ ಸವಾಲುಗಳು ಎದುರಿಸಬೇಕಾಗುತ್ತದೆ. ಆ ನಿಟ್ಟಿನಲ್ಲಿ ಆತ್ಮ ವಿಶ್ವಾಸವನ್ನು ಬೆಳೆಸಿಕೊಂಡು ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ವೃದ್ಧಿಸಿ ಕೊಳ್ಳಬೇಕಾಗಿದೆ ಎಂದು ಅವರು ತಿಳಿಸಿದರು.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ 2018ರ ಆ.1ರಿಂದ 2019ರ ಸೆ.31ರವರೆಗೆ ಹುತಾತ್ಮರಾದ ಕರ್ನಾಟಕ ರಾಜ್ಯದ 12 ಮಂದಿ ಸೇರಿದಂತೆ ದೇಶದ ಒಟ್ಟು 292 ಪೊಲೀಸರ ನಾಮಸ್ಮರಣೆ ಮಾಡಿದರು. ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿವೈಎಸ್ಪಿ ರಾಘವೇಂದ್ರ ನೇತೃತ್ವದಲ್ಲಿ ಪರೇಡ್ ನಡೆಯಿತು.

ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಉಪಸ್ಥಿತರಿದ್ದರು. ಉಡುಪಿ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News