ಕಮಲೇಶ್ ತಿವಾರಿ ಹತ್ಯೆ ಪ್ರಕರಣ ಶಂಕಿತರ ಮಾಹಿತಿ ನೀಡಿದವರಿಗೆ 5 ಲಕ್ಷ ರೂ. ಬಹುಮಾನ

Update: 2019-10-21 16:15 GMT

ಲಕ್ನೋ, ಅ. 21: ಹಿಂದೂ ಸಮಾಜ್ ಪಕ್ಷದ ಕಮಲೇಶ್ ತಿವಾರಿ ಹತ್ಯೆ ಪ್ರಕರಣದ ಇಬ್ಬರು ಶಂಕಿತರನ್ನು ಬಂಧಿಸಲು ನೆರವು ನೀಡುವವರಿಗೆ ತಲಾ 2.5 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಉತ್ತರಪ್ರದೇಶದ ಪೊಲೀಸ್ ಪ್ರಧಾನ ನಿರ್ದೇಶಕ ಒ.ಪಿ. ಸಿಂಗ್ ಸೋಮವಾರ ಪ್ರಕಟಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಉತ್ತರಪ್ರದೇಶ ಪೊಲೀಸರು ಇತರ ಮೂವರು ಆರೋಪಿಗಳನ್ನು ಗುಜರಾತ್‌ನಿಂದ ಲಕ್ನೋಗೆ ಕರೆ ತಂದಿದ್ದಾರೆ.

 ಅಹ್ಮದಾಬಾದ್‌ನ ನ್ಯಾಯಾಲಯ ಮೂವರನ್ನು 72 ಗಂಟೆಗಳ ವರ್ಗಾವಣೆ ಕಸ್ಟಡಿ ನೀಡಿದ ಬಳಿಕ ಪೊಲೀಸರು ಅವರನ್ನು ಇಲ್ಲಿಗೆ ಕರೆ ತಂದಿದ್ದಾರೆ. ತಿವಾರಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಗುಜರಾತ್ ಪೊಲೀಸ್ ಹಾಗೂ ಉತ್ತರಪ್ರದೇಶ ಪೊಲೀಸ್‌ನ ಜಂಟಿ ತಂಡ ಸೂರತ್‌ನಲ್ಲಿ ಶನಿವಾರ ವೌಲನಾ ಮೊಹ್ಸಿನ್ ಶೇಕ್ (24), ಖುರ್ಷಿದ್ ಅಹ್ಮದ್ ಪಠಾಣ್ (23) ಹಾಗೂ ಫೈಝನ್‌ನನ್ನು ಬಂಧಿಸಿತ್ತು. ಕಮಲೇಶ್ ತಿವಾರಿ ಅವರನ್ನು ಲಕ್ನೊದಲ್ಲಿರುವ ಅವರ ನಿವಾಸದಲ್ಲಿ ಶುಕ್ರವಾರ ಕತ್ತು ಕತ್ತರಿಸಲಾಗಿತ್ತು ಹಾಗೂ ಅವರ ಮೇಲೆ ಗುಂಡು ಹಾರಿಸಲಾಗಿತ್ತು.

 ಗಂಭೀರ ಗಾಯಗೊಂಡಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಲಾಗಿತ್ತು. ಆದರೆ, ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ‘‘ಕಮಲೇಶ್ ಹತ್ಯೆ ಪ್ರಕರಣದ ಕೊಂಡಿ ಉತ್ತರ ಪ್ರದೇಶದ ಒಳಗೆ ಹಾಗೂ ಹೊರಗೆ ಇದೆ. ಆದರೆ, ಈ ಸನ್ನಿವೇಶದಲ್ಲಿ ನಾವು ಯಾವುದೇ ಆಯಾಮವನ್ನು ನಿರಾಕರಿಸಲಾರೆವು’’ ಎಂದು ಸಿಂಗ್ ತಿಳಿಸಿದ್ದಾರೆ.

‘‘ಈ ಪ್ರಕರಣದಲ್ಲಿ ಪೊಲೀಸರು ಸೂಕ್ಷ್ಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತನಿಖೆಯಲ್ಲಿ ಯಾವುದೇ ಆಯಾಮ ನಿರ್ಲಕ್ಷಿಸುವ ಸಾಧ್ಯತೆ ಇಲ್ಲ. ಮಹಾರಾಷ್ಟ್ರ, ಗುಜರಾತ್, ಹರ್ಯಾಣ, ಅಂಬಾಲ ಅಥವಾ ಉತ್ತರ ಪ್ರದೇಶದ ಆಯಾಮವನ್ನು ತಿರಸ್ಕರಿಸುವುದಿಲ್ಲ. ಎಲ್ಲ ರಾಜ್ಯಗಳ ಪೊಲೀಸ್ ಇಲಾಖೆಯ ಮುಖ್ಯಸ್ಥರೊಂದಿಗೆ ಸಂಪರ್ಕದಲ್ಲಿ ಇರುತ್ತೇವೆ’’ ಎಂದು ಸಿಂಗ್ ಹೇಳಿದ್ದಾರೆ.

ಪ್ರಮುಖ ಶಂಕಿತ ತಿವಾರಿ ಅವರೊಂದಿಗೆ ಗೆಳೆತನ ಬೆಳೆಸಲು ನಕಲಿ ಫೇಸ್‌ಬುಕ್ ಖಾತೆ ತೆರೆದಿದ್ದ

ಸೂರತ್: ಕಮಲೇಶ್ ತಿವಾರಿ ಹತ್ಯೆ ಪ್ರಕರಣದ ಪ್ರಮುಖ ಶಂಕಿತರಲ್ಲಿ ಓರ್ವ ಸಾಮಾಜಿಕ ಮಾಧ್ಯಮದ ಮೂಲಕ ತಿವಾರಿ ಅವರೊಂದಿಗೆ ಗೆಳೆತನ ಬೆಳೆಸಲು ನಕಲಿ ಗುರುತು ಸೃಷ್ಟಿಸಿದ್ದ ಎಂದು ತಿವಾರಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಗುಜರಾತ್ ಎಟಿಎಸ್‌ಗೆ ತಿಳಿದುಬಂದಿದೆ.

ಲಕ್ನೋದ ತನ್ನ ನಿವಾಸದಲ್ಲಿ ಹತ್ಯೆಯಾದ ಹಿಂದೂ ಸಮಾಜ್ ಪಕ್ಷದ ನಾಯಕ ಕಮಲೇಶ್ ತಿವಾರಿ ಅವರನ್ನು ಸಂಪರ್ಕಿಸಲು ಅಶ್ಫಾಕ್ ಎಂಬ ಹೆಸರಿನ ವ್ಯಕ್ತಿ ಈ ವರ್ಷ ಜೂನ್‌ನಲ್ಲಿ ರೋಹಿತ್ ಸೋಲಂಕಿ ಎಂಬ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದಿದ್ದ ಎಂದು ಸ್ಥಳೀಯ ನಾಯಕ ಜೈಮಿನ್ ಬಾಪು ಗುಜರಾತ್ ಎಟಿಎಸ್‌ಗೆ ತಿಳಿಸಿದ್ದಾರೆ. ಹತ್ಯೆಯಾಗುವ ದಿನ ಅಂದರೆ ಅಕ್ಟೋಬರ್ 18ರಂದು ಕಮಲೇಶ್ ಅವರು ರೋಹಿತ್‌ನನ್ನು ಭೇಟಿಯಾಗಲು ಸಮಯ ನಿರ್ಧರಿಸಿದ್ದರು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News