ಗುರು ರವಿದಾಸ್ ದೇವಾಲಯ ನಿರ್ಮಾಣಕ್ಕೆ 400 ಚದರ ಮೀಟರ್ ಭೂಮಿ ನೀಡುವ ಪ್ರಸ್ತಾಪಕ್ಕೆ ಸುಪ್ರೀಂ ಒಪ್ಪಿಗೆ

Update: 2019-10-21 16:19 GMT

ಹೊಸದಿಲ್ಲಿ, ಅ. 21: ನ್ಯಾಯಾಲಯ ಈ ಹಿಂದೆ ನೀಡಿದ ಆದೇಶದಂತೆ ಡಿಡಿಎ ಧ್ವಂಸಗೊಳಿಸಿದ ಗುರು ರವಿದಾಸ್ ದೇವಾಲಯವನ್ನು ಮರು ನಿರ್ಮಾಣ ಮಾಡಲು ಇಲ್ಲಿನ ತುಘ್ಲಕಾಬಾದ್ ಅರಣ್ಯ ಪ್ರದೇಶದ 400 ಚದರ ಮೀಟರ್ ಭೂಮಿ ನೀಡುವ ಕೇಂದ್ರ ಸರಕಾರದ ಪರಿಷ್ಕೃತ ಪ್ರಸ್ತಾವಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ಒಪ್ಪಿಗೆ ನೀಡಿದೆ.

ಭಕ್ತರ ನಂಬಿಕೆ ಹಾಗೂ ಭಾವನೆಗಳನ್ನು ಗಮನದಲ್ಲಿ ಇರಿಸಿಕೊಂಡು ದೇವಾಲಯ ನಿರ್ಮಾಣಕ್ಕೆ 200 ಚದರ ಮೀಟರ್‌ಗೆ ಭೂಮಿಗೆ ಬದಲಾಗಿ 400 ಚದರ ಮೀಟರ್ ಭೂಮಿ ನೀಡುವ ಪರಿಷ್ಕೃತ ಪ್ರಸ್ತಾವವನ್ನು ಕೇಂದ್ರ ಸರಕಾರದ ಹೊಂದಿದೆ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ನ್ಯಾಯಮೂರ್ತಿ ಅರುಣ್ ಮಿಶ್ರಾ ಹಾಗೂ ಶ್ರೀಪತಿ ರವೀಂದ್ರ ಭಟ್ ಅವರನ್ನೊಳಗೊಂಡ ಪೀಠಕ್ಕೆ ತಿಳಿಸಿದರು.

ನಿಗದಿಪಡಿಸಲಾದ ಭೂಮಿಯಲ್ಲಿ ದೇವಾಲಯ ನಿರ್ಮಾಣ ಮಾಡಲು 6 ವಾರಗಳ ಒಳಗಡೆ ಸಮಿತಿ ರೂಪಿಸುವಂತೆ ಪೀಠ ಕೇಂದ್ರ ಸರಕಾರಕ್ಕೆ ನಿರ್ದೇಶಿಸಿತು. ದೇವಾಲಯ ಧ್ವಂಸ ವಿರೋಧಿಸಿ ಪ್ರತಿಭಟನೆ ನಡೆಸಿದ ಸಂದರ್ಭ ಬಂಧಿತರಾಗಿರುವ ವ್ಯಕ್ತಿಗಳನ್ನು ವೈಯುಕ್ತಿಕ ಬಾಂಡ್ ಸ್ವೀಕರಿಸಿ ಬಿಡುಗಡೆ ಮಾಡುವಂತೆ ಪೀಠ ನಿರ್ದೇಶಿಸಿದೆ.

ನಿರ್ದಿಷ್ಟ ಷರತ್ತಿನೊಂದಿಗೆ ದಕ್ಷಿಣ ದಿಲ್ಲಿಯಲ್ಲಿ ಗುರು ರವಿದಾಸ್ ದೇವಾಲಯ ನಿರ್ಮಾಣ ಮಾಡಲು ಭಕ್ತರಿಗೆ 200 ಚದರ ಮೀಟರ್ ಭೂಮಿ ಹಸ್ತಾರಿಸುವ ಆಕಾಂಕ್ಷೆ ಹೊಂದಿರುವುದಾಗಿ ಕೇಂದ್ರ ಸರಕಾರ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ನಾನು ಭಕ್ತರು, ಸರಕಾರದ ಅಧಿಕಾರಿಗಳು ಸೇರಿದಂತೆ ಎಲ್ಲ ಕಕ್ಷಿಗಾರರೊಂದಿಗೆ ಮಾತುಕತೆ ನಡೆಸಿದ್ದೇನೆ. ಆ ಸ್ಥಳದ ಮೇಲೆ ಭಕ್ತರಿಗೆ ಇರುವ ನಂಬಿಕೆ ಹಾಗೂ ಅಲ್ಲಿನ ಸೂಕ್ಷತೆ ಪರಿಗಣಿಸಿ ಅದೇ ಜಾಗವನ್ನು ನೀಡಲು ಕೇಂದ್ರ ಸರಕಾರ ಒಪ್ಪಿಕೊಂಡಿದೆ ಎಂದು ವೇಣುಗೋಪಾಲ್ ಹೇಳಿದ್ದರು. ಯಾವುದೇ ರೀತಿಯ ಆಕ್ಷೇಪ ಇದ್ದರೆ ಸೋಮವಾರ ಪ್ರತಿಕ್ರಿಯೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಕಕ್ಷಿಗಾರರಿಗೆ ತಿಳಿಸಿತ್ತು ಹಾಗೂ ಈ ಪ್ರಕರಣದ ಬಗ್ಗೆ ಆದೇಶ ನೀಡಲಾಗುವುದು ಎಂದು ಹೇಳಿತ್ತು. ದೇವಾಲಯ ನಿರ್ಮಿಸಲು ಉತ್ತಮ ಭೂಮಿ ಕುರಿತು ಸೌಹಾರ್ದಯುತ ಪರಿಹಾರದೊಂದಿಗೆ ಮರಳಿ ಬರುವಂತೆ ದಿಲ್ಲಿಯ ತುಘ್ಲಕಾಬಾದ್ ಅರಣ್ಯ ಪ್ರದೇಶದಲ್ಲಿ ಗುರು ರವಿದಾಸ ದೇವಾಲಯ ಮರು ನಿರ್ಮಾಣ ಮಾಡಲು ಅನುಮತಿ ಕೋರಿ ಮನವಿ ಸಲ್ಲಿಸಿದ ಕಕ್ಷಿಗಾರರಲ್ಲಿ ಸುಪ್ರೀಂ ಕೋರ್ಟ್ ತಿಳಿಸಿತ್ತು.

ನ್ಯಾಯಾಲಯದ ಆದೇಶದಂತೆ ದಿಲ್ಲಿ ಅಭಿವೃದ್ಧಿ ಪ್ರಾಧಿಕಾರ ಈ ದೇವಾಲಯವನ್ನು ಧ್ವಂಸ ಮಾಡಿತ್ತು. ಅನಂತರ ದಿಲ್ಲಿಯಲ್ಲಿ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು ಹಾಗೂ ಪ್ರತಿಭಟನೆ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News