ಬೆಳ್ತಂಗಡಿಯಲ್ಲಿ ಭಾರೀ ಮಳೆ: ನದಿ ನೀರು ಏರಿಕೆ; ಜನರಲ್ಲಿ ಆತಂಕ

Update: 2019-10-21 16:35 GMT

ಬೆಳ್ತಂಗಡಿ: ಸೋಮವಾರ ರಾತ್ರಿಯ ವೇಳೆ ಸುರಿದ ಭಾರೀ ಮಳೆಗೆ ಚಾರ್ಮಾಡಿ ಗ್ರಾಮದಲ್ಲಿ ಮೃತ್ಯುಂಜಯ ಹೊಳೆ ತುಂಬಿ ಹರಿದಿದ್ದು ಅಂತರ, ಕೊಳಂಬೆ ಪ್ರದೇಶಗಳಲ್ಲಿ ಕೃಷಿ ಭೂಮಿಗೆ ನೀರು ನುಗ್ಗಿದೆ. ಇದೀಗ ಹೂಳು ತೆಗೆದು ಕೃಷಿ ಮಾಡಿದ್ದ ಕೊಳಂಬೆ ಪ್ರದೇಶದ ಕೆಲವೆಡೆ ಗದ್ದೆಗಳಿಗೆ ನೀರು ನುಗ್ಗಿದೆ. ರಾತ್ರಿಯ ವೇಳೆ ನದಿಯಲ್ಲಿ ಏಕಾಏಕಿ ನೀರು ಏರಿಕೆಯಾಗಿದ್ದು ಜನರಲ್ಲಿ ಮತ್ತೆ ಭಯ ಮೂಡುವಂತೆ ಮಾಡಿದೆ. 

ಚಾರ್ಮಾಡಿಯ ಅಂತರ ಪ್ರದೇಶದಲ್ಲಿ ನೀರು  ಕೃಷಿ ಭೂಮಿಗೆ ನುಗ್ಗಿದೆ. ಮೃತ್ಯುಂಜಯ ನದಿಯಲ್ಲಿ ತುಂಬಿರುವ ಹೋಳನ್ನು ತೆಗೆಯದಿರುವ ಹಿನ್ನಲೆಯಲ್ಲಿ ಜೋರಾಗಿ ಮಳೆ ಬಂದಕೂಡಲೇ ನದಿಗಳು ದಡಮೀರಿ ಹರಿಯುತ್ತಿದೆ. ತಡ ರಾತ್ರಿಯ ವೇಳೆಗೆ ನದಿಯ ನೀರು ಸಂಪೂರ್ಣ ಕೆಳಗಿಳಿದಿದ್ದು ಯಾವುದೇ ಆತಂಕಕಾರಿ ಸ್ಥಿತಿಯಿಲ್ಲ. ದಿಡುಪೆ ಪರಿಸರದಲ್ಲಿಯೂ ಮಳೆಗೆ ನದಿಗಳು ಏಕಾ ಏಕಿ ತುಂಬಿ ಹರಿದಿದ್ದು ಜನರಲ್ಲಿ ಭಯ ಮೂಡಿಸಿತ್ತು.

ಪಶ್ಚಿಮಘಟ್ಟದಲ್ಲಿ ಭಾರೀ ಮಳೆ ಸುರಿಯುತ್ತಿದ್ದು  ಅದು ಇನ್ನೂ ಕೆಲ ದಿನ ಮುಂದುವರಿಯುವ ಸೂಚನೆಯಿದ್ದು ಇದು ಮುಂದುವರಿದರೆ ಜನರು ಭಯದ ನೆರಳಿನಲ್ಲಿಯೇ ಬದುಕಬೇಕಾಗಿ ಬರಲಿದೆ. ಹಿಂಗಾರು ಮಳೆಗೆ ದಿಡಿಪೆ ಹಾಗೂ ಚಾರ್ಮಾಡಿಯಲ್ಲಿ ನದಿಗಳು ಏಕಾ ಏಕಿ ತುಂಬಿ ಹರಿಯುತ್ತಿದ್ದು ಇದಕ್ಕೆ ಪರಿಹಾರವನ್ನು ಕಾಣುವ ಅಗತ್ಯವಿದೆ ಎಂಬುದು ಸ್ಥಳೀಯ ಜನರ ಒತ್ತಾಯವಾಗಿದೆ. ತಾಲೂಕಿನ ಇತರ ಎಲ್ಲ ಪ್ರದೇಶಗಳಲ್ಲಿಯೂ ಸಂಜೆಯಿಂದ ಮಳೆ ನಿರಂತರವಾಗಿ ಸುರಿಯುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News