ಸಿರಿಯದ ತೈಲ ನಿಕ್ಷೇಪಗಳ ಬಳಿಕ ಕೆಲ ಅಮೆರಿಕ ಸೈನಿಕರ ನಿಯೋಜನೆ ಸಾಧ್ಯತೆ

Update: 2019-10-21 17:00 GMT

ದೊಹುಕ್ (ಇರಾಕ್), ಅ. 21: ಐಸಿಸ್ ಭಯೋತ್ಪಾದಕರಿಗೆ ತೈಲ ಸಿಗದಂತೆ ನೋಡಿಕೊಳ್ಳುವಲ್ಲಿ ಕುರ್ದಿಶ್ ನೇತೃತ್ವದ ಸಿರಿಯನ್ ಡೆಮಾಕ್ರಟಿಕ್ ಪಡೆ (ಎಸ್‌ಡಿಎಫ್)ಗಳಿಗೆ ನೆರವು ನೀಡಲು ಅಮೆರಿಕದ ಕೆಲವು ಸೈನಿಕರನ್ನು ತೈಲ ನಿಕ್ಷೇಪಗಳ ಸಮೀಪ ನಿಯೋಜಿಸುವ ಬಗ್ಗೆ ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ಪರಿಶೀಲಿಸುತ್ತಿದೆ ಎಂದು ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಸೋಮವಾರ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಆದೇಶದಂತೆ, ಸಿರಿಯದಿಂದ ಸೇನಾ ವಾಪಸಾತಿಯ ಭಾಗವಾಗಿ ಉತ್ತರ ಸಿರಿಯದಲ್ಲಿದ್ದ ಅಮೆರಿಕದ ಸೈನಿಕರು ಗಡಿ ದಾಟಿ ಇರಾಕ್ ಪ್ರವೇಶಿಸುತ್ತಿದ್ದಾರೆ. ಇದರ ಪ್ರಯೋಜನವನ್ನು ಪಡೆದುಕೊಂಡಿರುವ ಟರ್ಕಿಯು ಸಿರಿಯನ್ ಡೆಮಾಕ್ರಟಿಕ್ ಪಡೆ ವಿರುದ್ಧ ಭಾರೀ ಪ್ರಮಾಣದ ಸೇನಾ ಕಾರ್ಯಾಚರಣೆ ನಡೆಸಿದೆ.

ಸಿರಿಯನ್ ಡೆಮಾಕ್ರಟಿಕ್ ಪಡೆಗಳು ಐಸಿಸ್ ವಿರುದ್ಧದ ಅಮೆರಿಕದ ಹೋರಾಟದಲ್ಲಿ ಹಲವು ವರ್ಷಗಳ ಕಾಲ ಅಮೆರಿಕದ ಮಿತ್ರಪಕ್ಷವಾಗಿತ್ತು.

ಸೋಮವಾರ ಮುಂಜಾನೆ ಸಿರಿಯದ ಈಶಾನ್ಯ ತುದಿಯಿಂದ ನೂರಕ್ಕೂ ಅಧಿಕ ವಾಹನಗಳು ಗಡಿ ದಾಟಿ ಇರಾಕ್ ಪ್ರವೇಶಿಸಿದವು.

 ಅಫ್ಘಾನಿಸ್ತಾನಕ್ಕೆ ನೀಡಿದ ಭೇಟಿಯ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪರ್, ಸಿರಿಯದಿಂದ ಅಮೆರಿಕದ ಸೈನಿಕರ ವಾಪಸಾತಿ ಕಾರ್ಯ ನಡೆಯುತ್ತಿದ್ದರೂ, ಕೆಲವು ಸೈನಿಕರು ಈಗಲೂ ತೈಲ ನಿಕ್ಷೇಪಗಳ ಸಮೀಪ ಮಿತ್ರಪಕ್ಷಗಳ ಸೈನಿಕರೊಂದಿಗೆ ಇದ್ದಾರೆ ಹಾಗೂ ಅವರ ಪೈಕಿ ಕೆಲವು ಸೈನಿಕರನ್ನು ಅಲ್ಲೇ ಇರಿಸುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ ಎಂದು ಹೇಳಿದರು.

ಎಲ್ಲ ಹೋರಾಟಗಾರರು ಹಿಂದಕ್ಕೆ: ಕುರ್ದಿಶ್ ಪಡೆಗಳು

ಗಡಿ ಪಟ್ಟಣ ರಾಸ್ ಅಲ್ ಐನ್‌ನಿಂದ ಎಲ್ಲ ಹೋರಾಟಗಾರರನ್ನು ಹಿಂದಕ್ಕೆ ಪಡೆದಿರುವುದಾಗಿ ಕುರ್ದಿಶ್ ನೇತೃತ್ವದ ಸಿರಿಯನ್ ಡೆಮಾಕ್ರಟಿಕ್ ಫೋರ್ಸಸ್ ರವಿವಾರ ಹೇಳಿದೆ.

ಅದೇ ವೇಳೆ, ಐದು ದಿನಗಳ ಯುದ್ಧವಿರಾಮದ ಬಗ್ಗೆ ಅಮೆರಿಕ ನೀಡಿರುವ ಭರವಸೆಯನ್ನು ಅದು ಉಳಿಸಿಕೊಳ್ಳಬೇಕು ಎಂದು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News