​ಎಂಎಸ್‌ಎಂಇ ವಿಳಂಬ ಪಾವತಿ ಕಾಯ್ದೆ ಅರಿವು ಕಾರ್ಯಕ್ರಮ

Update: 2019-10-21 17:32 GMT

ಮಂಗಳೂರು, ಅ.21: ನಗರದ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿನ ಕೆನರಾ ಸಣ್ಣ ಕೈಗಾರಿಕಾ ಸಂಘ (ಕೆಎಸ್‌ಐಎ)ದ ಸಭಾಂಗಣದಲ್ಲಿ ಸೋಮವಾರ ಸಂಜೆ ಎಂಎಸ್‌ಎಂಇ ವಿಳಂಬ ಪಾವತಿ ಕಾಯ್ದೆ ಹಾಗೂ ಕಾರ್ಮಿಕ ವೇತನ ಸಂಹಿತೆ-2019, ಎನ್‌ಎಸ್‌ಐಸಿ, ಕೆಎಸ್‌ಎಫ್‌ಸಿ ಮತ್ತು ಟ್ರೆಡ್ಸ್ ಯೋಜನೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೇಂದ್ರ ಸರಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾಭಿವೃದ್ಧಿ ಆಯುಕ್ತಾಲಯದ ಉಪನಿರ್ದೇಶಕ ಪಿಯೂಷ್ ಅಗರವಾಲ್, ಸಣ್ಣ ಕೈಗಾರಿಕೆ ರಂಗದಲ್ಲಿ ಪಾವತಿ ವಿಳಂಬ ಸಂಬಂಧ ಕಾಯ್ದೆ ಬಹಳ ವರ್ಷಗಳ ಹಿಂದೆಯೇ ಇದ್ದರೂ ಇದೀಗ ಜಾಗೃತಿ ಕಾರ್ಯಕ್ರಮ ಅಂಗವಾಗಿ ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ 23 ಸಾವಿರ ವಿಳಂಬ ಪಾವತಿ ಕುರಿತ ಪ್ರಕರಣಗಳು ದಾಖಲಾಗಿವೆ ಎಂದರು.

ಕಾಸಿಯಾ (ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ) ಅಧ್ಯಕ್ಷ ಆರ್.ರಾಜು ಮಾತನಾಡಿ, ವಿಳಂಬ ಪಾವತಿಯಿಂದ ಕೈಗಾರಿಕೆಗಳಿಗೆ ಸಮಸ್ಯೆಯಾಗುತ್ತಿದೆ. ಇದಕ್ಕಾಗಿ ಎಂಎಸ್‌ಎಂಇ ವಿಳಂಬ ಪಾವತಿ ಕಾಯ್ದೆ ಜಾರಿಗೆ ಬಂದಿದೆ. ಕಾಸಿಯಾ ಈ ಬಗ್ಗೆ ರಾಜ್ಯದ ಹುಬ್ಬಳ್ಳಿ-ಧಾರವಾಡ, ಮೈಸೂರು, ಗುಲ್ಬರ್ಗಾ, ಮಂಗಳೂರಿನಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಿದೆ. ಕೌನ್ಸಿಲ್‌ನಿಂದ ಈಗಾಗಲೇ ಕೋಟ್ಯಂತರ ರೂ.ವರೆಗೆ ಹಣ ಪಾವತಿ ಆಗಿರುವ ನಿದರ್ಶನಗಳಿವೆ. ಸಂಘದ ಸದಸ್ಯರು ಈ ಬಗ್ಗೆ ಹೆಚ್ಚಿನ ನಿಗಾ ವಹಿಸಿ ಪಾವತಿ ಪಡೆಯಲು ಮುಂದಾಗಬೇಕು ಎಂದರು.
ಕರ್ನಾಟಕ ರಾಜ್ಯ ಹಣಕಾಸು ನಿಗಮದ ಕಾರ್ಯ ನಿರ್ವಾಹಕ ನಿರ್ದೇಶಕ ಬಿ.ಸಿ.ಶಿವಪ್ರಕಾಶ್ ಮಾತನಾಡಿ, ಕೆಎಸ್‌ಎಫ್‌ಸಿ ಯೋಜನೆಗಳ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕಾಸಿಯಾ ಲೇಬಲ್ ಪ್ಯಾನಲ್ ಚೇರ್‌ಮನ್ ಎಸ್.ನಾಗರಾಜು, ಎನ್‌ಎಸ್‌ಐಸಿ ವಲಯ ಮುಖ್ಯ ಪ್ರಧಾನ ವ್ಯವಸ್ಥಾಪಕ ಪಿ.ರವಿಕುಮಾರ್, ಯಸ್ ಬ್ಯಾಂಕ್ ರೀಟೆಲ್ ಟ್ರೇಡ್ ಫೊರೆಕ್ಸ್‌ನ ಸಹಾಯಕ ಉಪಾಧ್ಯಕ್ಷ ಲಲಿಪ್ ನಂದ, ಕೆರೆನ್ ಲಿಬರ್ಸ್ ಇಂಡಿಯಾದ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಗೋವಿಂದರಾಜು ಎನ್.ಎಸ್., ಕಾಸಿಯಾ ಉಪಾಧ್ಯಕ್ಷ ಕೆ.ಬಿ.ಅರಸಪ್ಪ, ಜಂಟಿ ಕಾರ್ಯದರ್ಶಿ ವಿಶ್ವನಾಥ್ ಗೌಡರ್, ಖಜಾಂಚಿ ಎಸ್.ಎಂ.ಹುಸೈನ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕೆಎಸ್‌ಐಎ ಉಪಾಧ್ಯಕ್ಷ ಐಸಾಕ್ ವಾಸ್ ಸ್ವಾಗತಿಸಿದರು. ಕಾಸಿಯಾ ಗ್ರಾಮೀಣಾಭಿವೃದ್ಧಿ ಪ್ಯಾನಲ್ ಅಧ್ಯಕ್ಷ ಅರುಣ್ ಪಡಿಯಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News