ಫೇಸ್‌ಬುಕ್ ವಿರುದ್ಧ ವಿಶ್ವಾಸದ್ರೋಹ ತನಿಖೆಯಲ್ಲಿ ಸೇರಿಕೊಂಡ 46 ಅಟಾರ್ನಿ ಜನರಲ್‌ಗಳು

Update: 2019-10-22 18:28 GMT

 ನ್ಯೂಯಾರ್ಕ್,ಅ.22: ನ್ಯೂಯಾರ್ಕ್ ಸರಕಾರದ ನೇತೃತ್ವದಲ್ಲಿ ಫೇಸ್‌ಬುಕ್‌ನ ವಿರುದ್ಧ ವಿಶ್ವಾಸದ್ರೋಹ ಆರೋಪದ ಕುರಿತು ನಡೆಯುತ್ತಿರುವ ತನಿಖೆಯಲ್ಲಿ 46 ರಾಜ್ಯಗಳ ಅಟಾರ್ನಿ ಜನರಲ್‌ಗಳು ಸೇರಿಕೊಂಡಿದ್ದಾರೆ ಎಂದು ಅಧಿಕಾರಿಗಳು ಪ್ರಕಟಿಸಿದ್ದಾರೆ. ಇದರೊಂದಿಗೆ ವ್ಯಾಪಕ ಉಭಯಪಕ್ಷೀಯ ತನಿಖೆಯಲ್ಲಿ ಪಾಲುದಾರರ ಸಂಖ್ಯೆಯು ಹೆಚ್ಚಿದ್ದು,ಇದು ಫೇಸ್‌ಬುಕ್ ತನ್ನ ವ್ಯವಹಾರದಲ್ಲಿ ಭಾರೀ ಬದಲಾವಣೆಗಳನ್ನು ತರಲು ನಾಂದಿ ಹಾಡಬಹುದು.

ತನಿಖೆಯಲ್ಲಿ ಭಾಗಿಯಾಗಿರುವ ರಾಜ್ಯಗಳ ಸಂಖ್ಯೆ ಹೆಚ್ಚುತ್ತಿರುವುದು ಫೇಸ್‌ಬುಕ್ ತನ್ನ ಬಳಕೆದಾರರ ಮಾಹಿತಿಗಳನ್ನು ಅಪಾಯಕ್ಕೆ ಸಿಲುಕಿಸಿರಬಹುದು,ಬಳಕೆದಾರರ ಆಯ್ಕೆಗಳ ಗುಣಮಟ್ಟವನ್ನು ಕಡಿಮೆಗೊಳಿಸಿದೆ ಮತ್ತು ಜಾಹೀರಾತು ದರಗಳನ್ನು ಹೆಚ್ಚಿಸಿದೆ ಎಂಬ ದೇಶದಲ್ಲಿ ಪೈಪೋಟಿಯ ಮೇಲೆ ನಿಗಾಯಿರಿಸಿರುವ ಕಾವಲು ಸಂಸ್ಥೆಗಳ ವ್ಯಾಪಕ ಕಳವಳಗಳನ್ನು ಪ್ರತಿಬಿಂಬಿಸುತ್ತಿದೆ ಎಂದು ನ್ಯೂಯಾರ್ಕ್‌ನ ಅಟಾರ್ನಿ ಜನರಲ್ ಲೆಟಿಷಿಯಾ ಜೇಮ್ಸ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ತನ್ಮಧ್ಯೆ ಕಂಪನಿಯು ಸರಕಾರಿ ಅಟಾರ್ನಿ ಜನರಲ್‌ಗಳೊಂದಿಗೆ ರಚನಾತ್ಮಕವಾಗಿ ಕಾರ್ಯ ನಿರ್ವಹಿಸಲಿದೆ. ನಾವು ಒದಗಿಸುವ ಪ್ರತಿಯೊಂದು ಸೇವೆಗೂ ಜನರಿಗೆ ಹಲವಾರು ಆಯ್ಕೆಗಳಿವೆ ಎಂದು ಫೇಸ್‌ಬುಕ್‌ನ ಸರಕಾರಿ ಮತ್ತು ಸ್ಥಳೀಯ ನೀತಿಗಳ ವಿಭಾಗದ ಉಪಾಧ್ಯಕ್ಷ ವಿಲ್ ಕ್ಯಾಸಲ್‌ಬರಿ ಅವರು ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News