ನಾಸಾದ ಎಲ್‌ಆರ್‌ಒ ತೆಗೆದ ಚಿತ್ರಗಳಲ್ಲೂ ಪತ್ತೆಯಾಗದ ವಿಕ್ರಮ್ ಲ್ಯಾಂಡರ್

Update: 2019-10-23 06:37 GMT

ವಾಷಿಂಗ್ಟನ್, ಅ.23: ನಾಸಾದ ಲೂನಾರ್ ರಿಕೊನ್ನೈಸನ್ಸ್ ಆರ್ಬಿಟರ್(ಎಲ್‌ಆರ್‌ಒ) ಇತ್ತೀಚೆಗೆ ಚಂದ್ರನ ಹತ್ತಿರದಿಂದ ಹಾದು ಹೋಗುವಾಗ ಕ್ಲಿಕ್ಕಿಸಿದ ಛಾಯಾಚಿತ್ರಗಳಲ್ಲೂ ಭಾರತದ ಚಂದ್ರಯಾನ-2 ಮಿಷನ್ ಭಾಗವಾಗಿದ್ದ ವಿಕ್ರಮ್ ಲ್ಯಾಂಡರ್ ಎಲ್ಲಿಯೂ ಪತ್ತೆಯಾಗಿಲ್ಲ ಎಂದು ನಾಸಾ ಹೇಳಿದೆ.

ಸೆಪ್ಟೆಂಬರ್ 7ರಂದು ವಿಕ್ರಮ್ ಆರ್ಬಿಟರ್ ಚಂದ್ರನ ಮೇಲ್ಮೈ ಪದರದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಬೇಕಿದ್ದರೂ ಅದು ಇಸ್ರೋದ ಜತೆಗಿನ ತನ್ನ ಸಂಪರ್ಕ ಕಳೆದುಕೊಂಡಿತ್ತು.

ಅಕ್ಟೋಬರ್ 2ರಂದು ನಾಸಾದ ಲೂನಾರ್ ಆರ್ಬಿಟರ್ ವಿಕ್ರಮ್ ಲ್ಯಾಂಡ್ ಆಗಬೇಕಿದ್ದ ಸ್ಥಳದ ಚಿತ್ರವನ್ನು ತೆಗೆದಿದ್ದರೂ ಅಲ್ಲಿ ಲ್ಯಾಂಡರ್ ಪತ್ತೆಯಾಗಿಲ್ಲ’’ ಎಂದು ಎಲ್‌ಆರ್‌ಒ ಮಿಷನ್ ಪ್ರಾಜೆಕ್ಟ್ ವಿಜ್ಞಾನಿ ನೋವ ಎಡ್ವರ್ಡ್ ಪೆಟ್ರೋ ಹೇಳಿದ್ದಾರೆ.

ವಿಕ್ರಮ್ ಲ್ಯಾಂಡ್ ಆಗಲು ನಡೆಸಿದ ಪ್ರಯತ್ನಕ್ಕಿಂತ ಮೊದಲಿನ ಚಂದ್ರನ ಮೇಲ್ಮೈ ಪದರದ ಚಿತ್ರ ಹಾಗೂ ಅಕ್ಟೋಬರ್ 14ರಂದು ತೆಗೆದ ಚಿತ್ರವನ್ನು ನಾಸಾ ತಂಡ ಸೂಕ್ಷ್ಮವಾಗಿ ಪರಿಶೀಲಿಸಿದೆ ಎಂದು ಪೆಟ್ರೋ ಹೇಳಿದ್ದಾರೆ.

ಹುಡುಕಿದ ಸ್ಥಳಕ್ಕಿಂತ ಹೊರಗಿನ ಸ್ಥಳದಲ್ಲಿ ಅಥವಾ ನೆರಳಿನ ಪ್ರದೇಶದಲ್ಲಿ ವಿಕ್ರಮ್ ಲ್ಯಾಂಡರ್ ಇರುವ ಸಾಧ್ಯತೆಯೂ ಇದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಈ ಹಿಂದೆ ಸೆಪ್ಟೆಂಬರ್ 17ರಂದು ಚಂದ್ರನ ಪಕ್ಕದಿಂದ ಹಾದು ಹೋದ ಸಂದರ್ಭ ಎಲ್‌ಆರ್‌ಒ ತೆಗೆದ ಚಿತ್ರಗಳಲ್ಲಿಯೂ ವಿಕ್ರಮ್ ಲ್ಯಾಂಡರ್ ಪತ್ತೆಯಾಗಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News