ದೇಶದಲ್ಲಿ ಹಿಂಸಾಚಾರ, ಅಪನಂಬಿಕೆ ಹೆಚ್ಚಳ: ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ

Update: 2019-10-23 14:19 GMT

ಹೊಸದಿಲ್ಲಿ, ಅ.23: ದೇಶದಲ್ಲಿ ಮನುಷ್ಯನ ಜೀವದ ಬಗ್ಗೆ ಅನಾದರದ ಭಾವನೆ ಹಾಗೂ ಹಿಂಸಾಚಾರ ಹೆಚ್ಚುತ್ತಿರುವ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ವೈವಿಧ್ಯತೆ ಭಾರತದ ಅಸ್ಮಿತೆಯಾಗಿದೆ ಎಂದು ಹೇಳಿದ್ದಾರೆ.

‘ನಾರ್ಥ್ ಈಸ್ಟ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್’ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾರತೀಯ ಸಮಾಜದಲ್ಲಿ ಸಹಿಷ್ಣುತೆ ಎಂಬ ವಿಷಯದಲ್ಲಿ ವೀಡಿಯೊ ಕಾನ್ಫರೆನ್ಸ್ ಮೂಲಕ ಅವರು ಉಪನ್ಯಾಸ ನೀಡಿದರು. ಭಾರತವು ಒಂದೇ ಭಾಷೆ ಅಥವಾ ಒಂದೇ ಧರ್ಮವನ್ನು ಹೊಂದಿಲ್ಲ. ಇಂದಿನ ದಿನದಲ್ಲಿ ಭಿನ್ನಾಭಿಪ್ರಾಯದಿಂದ ಹಿಂಸಾಚಾರ ಹೆಚ್ಚುತ್ತಿರುವುದನ್ನು ಕಾಣಬಹುದಾಗಿದೆ. ಈ ರೀತಿಯ ಹಿಂಸಾಚಾರ ಕೇವಲ ದೈಹಿಕ ತೊಂದರೆಗೆ ಮಾತ್ರ ಕಾರಣವಾಗದೆ, ಮಾನಸಿಕ, ಬೌದ್ಧಿಕ ತೊಂದರೆಯ ಜೊತೆಗೆ ಸಾಮಾಜಿಕ ಆರ್ಥಿಕ ನಷ್ಟಕ್ಕೂ ಕಾರಣವಾಗುತ್ತದೆ.

ಸಮಾಜದಲ್ಲಿ ಸಹಬಾಳ್ವೆ ನಡೆಸುವ ವ್ಯಕ್ತಿಗಳ ಬದುಕಿನ ಬಗ್ಗೆ ಅನಾದರದ ಭಾವನೆಯಿದೆ. ಅಪನಂಬಿಕೆ, ದ್ವೇಷಭಾವನೆ, ಶಂಕೆ, ಮತ್ಸರ ಹೆಚ್ಚಿದೆ. ಓರ್ವ ವ್ಯಕ್ತಿ, ಮಗು ಅಥವಾ ಮಹಿಳೆಯ ಮೇಲೆ ದೌರ್ಜನ್ಯ ನಡೆದಾಗಲೆಲ್ಲಾ ಭಾರತದ ಅಸ್ಮಿತೆಗೆ ಘಾಸಿಯಾಗುತ್ತದೆ. ಕ್ರೋಧದ ಅಭಿವ್ಯಕ್ತಿ ನಮ್ಮ ಸಾಮಾಜಿಕ ಚೌಕಟ್ಟನ್ನು ಛಿದ್ರಗೊಳಿಸುತ್ತದೆ ಎಂದವರು ಹೇಳಿದ್ದಾರೆ. ಸಾರ್ವಕಾಲಿಕ ಏಕತ್ವತಾವಾದ ಭಾರತದ ಹೆಗ್ಗುರುತಾಗಿದೆ. ಇಲ್ಲಿ 122 ಭಾಷೆ ಹಾಗೂ 1600 ಆಡುಭಾಷೆಯನ್ನು ಬಳಸುವ 1.3 ಬಿಲಿಯನ್ ಜನರಿದ್ದಾರೆ. 7 ಪ್ರಮುಖ ಧರ್ಮದವರು ಮತ್ತು ಮೂರು ಪ್ರಮುಖ ಜನಾಂಗೀಯ ಗುಂಪಿನವರು ಭಾರತೀಯರು ಎಂಬ ಒಂದೇ ವ್ಯವಸ್ಥೆಯಡಿ, ಒಂದೇ ಧ್ವಜದಡಿ ಬದುಕುವುದೇ ವೈವಿಧ್ಯತೆಯಲ್ಲಿ ಏಕತೆಯ ಹೆಗ್ಗಳಿಕೆಯಾಗಿದೆ. ಬಹುತ್ವ ಮತ್ತು ವೈವಿಧ್ಯತೆ ಭಾರತದ ಆತ್ಮವಾಗಿದೆ. ನಮ್ಮ ಸಮಾಜದಲ್ಲಿರುವ ಬಹುತ್ವ ಶತಮಾನಗಳಿಂದ ಅಭಿಮತಗಳ ಸಂಯೋಜನೆಯಿಂದ ರೂಪುಗೊಂಡಿದೆ. ಜಾತ್ಯತೀತತೆ ಮತ್ತು ಅಂತರ್ವೇಶನ (ಒಳಗೂಡಿಸುವಿಕೆ) ನಮ್ಮ ನಂಬಿಕೆಯ ವಿಷಯವಾಗಿದೆ. ಸಂಯೋಜಿತ ಸಂಸ್ಕೃತಿ ನಮ್ಮನ್ನು ಒಂದು ರಾಷ್ಟ್ರವನ್ನಾಗಿಸಿದೆ. ಸಹಿಷ್ಣುತೆ ಎಂಬುದು ಒಂದು ಮನಸ್ಥಿತಿಯಾಗಿದ್ದು ಅಹಿಂಸೆಯ ಬಗ್ಗೆ ಭಾರತೀಯರ ನಂಬಿಕೆಯ ಪ್ರತೀಕವಾಗಿದೆ. ಅಹಿಂಸೆ ಎಂಬುದು ಭಾರತೀಯ ನೀತಿಯ ತಿರುಳಾಗಿದ್ದು ಮಹಾತ್ಮಾ ಗಾಂಧೀಜಿ ಆಧುನಿಕ ಯುಗದಲ್ಲಿ ಇದರ ಸಮರ್ಥ ಪ್ರಚಾರಕರಾಗಿದ್ದರು. ಅಹಿಂಸೆ, ಸಹಿಷ್ಣುತೆ ಹಾಗೂ ಪರಸ್ಪರ ಗೌರವ ನೀಡುವ ವಿಷಯಗಳಲ್ಲಿ ಮಹಾತ್ಮಾ ಗಾಂಧೀಜಿಯವರಿಗಿದ್ದ ನಂಬಿಕೆಯನ್ನು ಉಳಿಸಿಕೊಳ್ಳಬೇಕಿದೆ. ಕ್ರೋಧ, ಹಿಂಸೆ ಮತ್ತು ಸಂಘರ್ಷದ ಮನೋಭಾವ ಬಿಟ್ಟು ಶಾಂತಿ, ಸೌಹಾರ್ದತೆ ಮತ್ತು ಸಂತೋಷದ ಸ್ಥಿತಿಯತ್ತ ಮುನ್ನಡೆಯಬೇಕಾಗಿದೆ ಎಂದು ಮುಖರ್ಜಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News