ಕೋಟ ಎಸ್ಸೈ ಮೇಲೆ ಹಲ್ಲೆಗೆ ಯತ್ನಿಸಿ ಕರ್ತವ್ಯಕ್ಕೆ ಅಡ್ಡಿ: ನಾಲ್ವರ ಬಂಧನ

Update: 2019-10-23 14:57 GMT

ಬ್ರಹ್ಮಾವರ, ಅ. 23: ಶಿರೂರು ಮೂರುಕೈ ಜಂಕ್ಷನ್ ಬಳಿ ಅ. 23ರಂದು ನಸುಕಿನ ವೇಳೆ ಗಸ್ತು ತಿರುಗುತ್ತಿದ್ದ ಕೋಟ ಪೊಲೀಸ್ ಠಾಣೆ ಉಪನಿರೀಕ್ಷಕ ನಿತ್ಯಾನಂದ ಗೌಡ ಅವರಿಗೆ ಯುವಕರ ಗುಂಪೊಂದು ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆಗೆ ಯತ್ನಿಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಬಗ್ಗೆ ವರದಿಯಾಗಿದೆ.

ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣಕ್ಕೆ ಸಂಬಂಧಿಸಿ ಮಂದರ್ತಿ ನೀರುಜೆಡ್ಡುವಿನ ಗುರುಪ್ರಸಾದ್ (34), ದಿಲೀಪ್, ಸುನೀಲ್, ಕಿರಣ್ ಎಂಬವರನ್ನು ಬ್ರಹ್ಮಾವರ ಪೊಲೀಸರು ಇಂದು ಬಂಧಿಸಿದ್ದಾರೆ.

ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಕೋಟ ಎಸ್ಸೈ ನಿತ್ಯಾನಂದ ಗೌಡ ಇಲಾಖಾ ವಾಹನದಲ್ಲಿ ಗಸ್ತು ತಿರುಗುವಾಗ ಶಿರೂರು ಮೂರುಕೈ ಜಂಕ್ಷನ್ ಬಳಿಯ ಅಂಗಡಿ ಎದುರು ಕತ್ತಲೆಯಲ್ಲಿ ಮೂವರು ಯುವಕರು ಅನುಮಾನಸ್ಪದವಾಗಿ ನಿಂತಿರುವುದು ಕಂಡು ಬಂದಿದ್ದು, ಅಲ್ಲದೆ ಅಲ್ಲೇ ಸಮೀಪ ಎರಡು ಬೈಕ್ ಹಾಗೂ ಒಂದು ಕಾರು ನಿಂತಿತ್ತು. ಈ ಬಗ್ಗೆ ಎಸ್ಸೈ ಮೂವರನ್ನು ವಿಚಾರಿಸಿದಾಗ ಸರಿಯಾದ ಉತ್ತರ ನೀಡಲಿಲ್ಲ ಎನ್ನಲಾಗಿದೆ. ನಂತರ ನಿತ್ಯಾನಂದ ಗೌಡ ಈ ಮೂವರು ಯುವಕರ ಬಗ್ಗೆ ತಿಳಿದುಕೊಳ್ಳುವ ಉದ್ದೇಶದಿಂದ ಒಟ್ಟಿಗೆ ನಿಲ್ಲಿಸಿ ಫೋಟೊ ತೆಗೆದುಕೊಂಡು ಅವರ ಬಳಿ ಇದ್ದ ಮೊಬೈಲ್ ವಶಕ್ಕೆ ಪಡೆದು ಬೆಳಗ್ಗೆ ಕೋಟ ಠಾಣೆಗೆ ವಿಚಾರಣೆಗೆ ಬರುವಂತೆ ತಿಳಿಸಿದರು. ನಂತರ ಪರಿಶೀಲಿಸಿದಾಗ ಅಲ್ಲಿಯೇ ಪಕ್ಕದಲ್ಲಿದ್ದ ಶುಭಲಕ್ಷ್ಮೀ ಬಾರ್ ಅಂಡ್ ರೆಸ್ಟೋ ರೆಂಟ್‌ನ ಎದುರು ಬಾಗಿಲು ಮುಚ್ಚಿದ್ದು ಹಿಂಬದಿಯಲ್ಲಿ 10ರಿಂದ 12 ಯುವಕರು ಮದ್ಯಪಾನ ಮಾಡುತ್ತಿರುವುದು ಕಂಡುಬಂತು. ಯುವಕರು ಎಸ್ಸೈಯನ್ನು ನೋಡಿ ಲೈಟ್ ಆಫ್ ಮಾಡಿದರು. ಈ ವೇಳೆ ಎಸ್ಸೈ ನಿತ್ಯಾನಂದ ಗೌಡ ಮೂರು ಮೊಬೈಲ್‌ಗಳೊಂದಿಗೆ ಜೀಪಿನಲ್ಲಿ ಬರುತ್ತಿವಾಗ ಗುರುಪ್ರಸಾದ್ ಏರು ದನಿಯಲ್ಲಿ ‘ಯಾವನೋ ನೀನು, ನಿಲ್ಲು ಅಲ್ಲಿ ನಿಂದು ಯಾವ ಕಾನ್‌ಸ್ಟೆನ್ಸಿ, ನೀನು ಇಲ್ಲಿ ಬಂದು ನನ್ನ ಯುವಕರನ್ನು ಕೇಳಿ ವಿಚಾರಿಸಲು ತಿಳಿಸಿದ್ದು ಯಾರು ? ಮರ್ಯಾದೆಯಿಂದ ಮೊಬೈಲ್ ಕೊಡು. ನಿನಗೆ ಸಿಎಂನಿಂದ ಕರೆ ಮಾಡಿಸಬೇಕಾ? ಎಂದು ಅವಾಚ್ಯ ಶಬ್ದದಿಂದ ನಿತ್ಯಾನಂದ ಗೌಡ ಹಾಗೂ ಅವರ ತಾಯಿಯ ಗೌರವಕ್ಕೆ ಚ್ಯುತಿ ಬರುವಂತೆ ಬೈದು ಬೆದರಿಕೆ ಹಾಕಿದರೆನ್ನಲಾಗಿದೆ.

ಅಲ್ಲದೇ ಆತನೊಂದಿಗೆ ಬಂದ ಇತರ 8 ರಿಂದ 10 ಮಂದಿ ಯುವಕರು ಗುಂಪು ಕಟ್ಟಿಕೊಂಡು ಜೀಪು ಮುಂದೆ ಹೋಗದಂತೆ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ಮಾಡಲು ಪ್ರಯತ್ನಿಸಿದರು. ಈ ಎಲ್ಲ ಯುವಕರು ಮದ್ಯಪಾನ ಮಾಡಿ ಮದ್ಯರಾತ್ರಿಯಲ್ಲಿ ಕರ್ತವ್ಯಕ್ಕೆ ಅಡ್ಡ ಪಡಿಸಿದ್ದು ನಂತರ ಅಲ್ಲಿಂದ ಕಾರಿನಲ್ಲಿ ಹಾಗೂ ಬೈಕ್‌ಗಳಲ್ಲಿ ಹೋಗಿದ್ದಾರೆ ಎಂದು ಎಸ್ಸೈ ನಿತ್ಯಾನಂದ ಗೌಡ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News