ಶಾರ್ಟ್ ಸಕ್ರ್ಯೂಟ್‍: ಪ್ಲೈವುಡ್ ಮಿಲ್‍ ಗೆ ಬೆಂಕಿ

Update: 2019-10-23 14:52 GMT

ಬಂಟ್ವಾಳ, ಅ. 23: ಶಾರ್ಟ್ ಸಕ್ರ್ಯೂಟ್‍ನಿಂದ ಪ್ಲೈವುಡ್ ಮಿಲ್‍ವೊಂದಕ್ಕೆ ಬೆಂಕಿ ತಗಲಿದ ಘಟನೆ ಬಂಟ್ವಾಳ ತಾಲೂಕಿನ ಬ್ರಹ್ಮರಕೂಟ್ಲು ಎಂಬಲ್ಲಿ ಬುಧವಾರ ಮುಂಜಾನೆ ಸಂಭವಿಸಿದೆ.

ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಲು ಸರಕಾರಿ ಶಾಲೆಯ ಮುಂಭಾಗದಲ್ಲಿ ಕಾರ್ಯಾಚರಿಸುತ್ತಿರುವ ಬ್ರಹ್ಮರಕೂಟ್ಲುವಿನ ಕೆ.ಹಮೀದ್ ಎಂಬವರ ಮಾಲಕತ್ವದ ಕೋಸ್ಟಲ್ ವುಡ್ ಪ್ರೊಡಕ್ಸ್ ಮಿಲ್‍ನಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ. ಘಟನೆಯಿಂದ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ಸುಟ್ಟು ಕರಕಲಾಗಿದೆ ಎಂದು ಪ್ರಾಥಮಿಕ ಹಂತದಲ್ಲಿ ಅಂದಾಜಿಸಲಾಗಿದೆ.

ಘಟನೆಯ ವಿವರ:

ಇಂದು ಮುಂಜಾನೆ 4ಗಂಟೆಯ ಸುಮಾರಿಗೆ ಮಿಲ್‍ನ ಒಳಭಾಗದಲ್ಲಿ ಹೊಗೆ ಕಾಣಿಸಿಕೊಂಡಿದೆ. ಈ ವೇಳೆ ಇಲ್ಲಿ ಕೆಲಸ ಮಾಡುತ್ತಿದ್ದ ವಾಚ್‍ಮ್ಯಾನ್ ಮಾಲಕರಿಗೆ ತಿಳಿಸಿದ್ದು, ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಅರ್ಧ ತಾಸಿನ ಬಳಿಕ ಬೆಂಕಿ ಮಿಲ್ ಒಳಭಾಗವಿಡೀ ವ್ಯಾಪಿಸಿದೆ. ಒಟ್ಟು ಮೂರು ವಿಭಾಗದ ಅಗ್ನಿಶಾಮಕ ದಳವು ಮೂರೂವರೆ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಸಂಭಾವ್ಯ ಅಪಾಯವನ್ನು ತಪ್ಪಿಸಿದೆ.

ಬೆಂಕಿಯ ಕೆನ್ನಾಲಿಗೆಗೆ ಪ್ಲೈವುಡ್ ತಯಾರಿಸಲು ಒಣಗಿಸಿದ ಕೋರ್, ಸ್ಪೇಸ್, ಸೀಟ್‍ಗಳು ಸುಟ್ಟು ಕರಕಲಾಗಿವೆ. ಅದಲ್ಲದೆ, ಯಂತ್ರೋಪಕರಣ ಗಳು, ವಿದ್ಯುತ್ ಪರಿಕರಗಳು, ಮಿಲ್‍ನ ಮೇಲ್ಭಾಗದ ಶೀಟ್‍ಗಳು ಸುಟ್ಟು ಹೋಗಿವೆ. ಘಟನೆಯಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಬಂಟ್ವಾಳದ 2 ಅಗ್ನಿಶಾಮಕ ವಾಹನ, ಕದ್ರಿ, ಪಾಂಡೇಶ್ವರ ಅಗ್ನಿ ಶಾಮಕ ವಾಹನ ಹಾಗೂ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದರು.

"ಮುಂಜಾನೆ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಅಗ್ನಿಶಾಮಕ ದಳದವರು ಧಾವಿಸಿ ಬೆಂಕಿ ನಂದಿಸಿದರು. ಶಾರ್ಟ್ ಸಕ್ರ್ಯೂಟ್ ನಿಂದ ಬೆಂಕಿ ತಗಲಿದೆ ಎಂದು ಶಂಕಿಸಲಾಗಿದ್ದು, ಪ್ಲೈವುಡ್ ತಯಾರಿಸುವ ಕಚ್ಛಾ ಸಾಮಗ್ರಿಗಳು ಬೆಂಕಿ ಸುಟ್ಟಿವೆ. ನಷ್ಟದ ಇನ್ನಷ್ಟೇ ಅಂದಾಜು ಮಾಡಬೇಕಾಗಿದೆ ಎಂದು ಕೋಸ್ಟಲ್ ಮಿಲ್‍ನ ಹನೀಫ್ ಪತ್ರಿಕೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News