ರಾಣಿ ಚೆನ್ನಮ್ಮರ ಸತ್ಯದ ಪರವಾದ ಹೋರಾಟ ನಮ್ಮೆಲ್ಲರಿಗೂ ಸ್ಫೂರ್ತಿ: ತಹಶೀಲ್ದಾರ್ ರಶ್ಮಿ

Update: 2019-10-23 14:54 GMT

ಬಂಟ್ವಾಳ, ಅ. 23: ಕಿತ್ತೂರು ರಾಣಿ ಚೆನ್ನಮ್ಮ ತೋರಿಸಿದ ಧೈರ್ಯ, ಸಾಹಸ, ಸತ್ಯದ ಪರವಾದ ಹೋರಾಟ ನಮ್ಮೆಲ್ಲರಿಗೂ ಸ್ಫೂರ್ತಿ ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ಹೇಳಿದ್ದಾರೆ.

ಅವರು ಬುಧವಾರ ಬಿ.ಸಿ.ರೋಡಿನ ಮಿನಿವಿಧಾನ ಸೌಧದಲ್ಲಿ ಬಂಟ್ವಾಳ ತಾಲೂಕು ಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಸಿಗದೇ ಇದ್ದ 18ನೇ ಶತಮಾನದಲ್ಲೇ ಒಬ್ಬ ಮಹಿಳೆಯಾಗಿ ಕಿತ್ತೂರು ರಾಣಿ ಚೆನ್ನಮ್ಮ ತೋರಿದ ಧೈರ್ಯ, ಸಾಹಸ ನಮಗೆಲ್ಲಾ ಪ್ರೇರಕಶಕ್ತಿಯಾಗಿದ್ದು, ಅವರು ಇಂದಿನ ಜನಾಂಗಕ್ಕೆ ದೇಶಭಕ್ತಿಯ ಪ್ರತೀಕವಾಗಿ ಗುರುತಿಸಲ್ಪಡುತ್ತಾರೆ ಎಂದರು.

ಶಿರಸ್ತೇದಾರ್ ಶ್ರೀಧರ್, ಗ್ರಾಮ ಸಹಾಯಕರ ಪರವಾಗಿ ಜಗನ್ನಾಥ್ ಅವರು ಕಿತ್ತೂರು ಚೆನ್ನಮ್ಮ ಅವರ ಕುರಿತು ಮಾತನಾಡಿದರು. ಕೇಂದ್ರ ಸ್ಥಾನೀಯ ಶಿರಸ್ತೇದಾರ್ ರಾಧಾಕೃಷ್ಣ, ಪಾಣೆಮಂಗಳೂರು ಹೋಬಳಿ ನಾಡಕಚೇರಿ ಉಪತಹಶೀಲ್ದಾರ್ ರೂಪೇಶ್‍ಕುಮಾರ್, ಸರ್ವೆ ಇಲಾಖೆಯ ಸುಪರ್‍ವೈಸರ್ ರಮಾದೇವಿ, ಪ್ರಭಾರ ಉಪತಹಶೀಲ್ದಾರ್ ಸೀತಾರಾಮ, ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯ ವಿಷಯ ನಿರ್ವಾಹಕ ವಿಷುಕುಮಾರ್, ತಾಲೂಕು ಕಚೇರಿ ಸಿಬಂದಿ, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು ಉಪಸ್ಥಿತರಿದ್ದರು.

ಪ್ರಥಮ ದರ್ಜೆ ಸಹಾಯಕ ಪ್ರಸನ್ನಕುಮಾರ್ ಪಕ್ಕಳ ಸ್ವಾಗತಿಸಿದರು. ಬಂಟ್ವಾಳ ಹೋಬಳಿ ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು ವಂದಿಸಿದರು. ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News