ಲಾರಿಯಿಂದ ನಗದು ಕಳವು: ಆರೋಪಿ ಬಂಧನ

Update: 2019-10-23 14:59 GMT

ಪುತ್ತೂರು:  ನಿಲ್ಲಿಸಲಾಗಿದ್ದ ಲಾರಿಯಲ್ಲಿದ್ದ ಲಕ್ಷಾಂತರ ರೂ. ನಗದು ಕಳವು ಮಾಡಿದ 9 ತಿಂಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಾ.18ರಂದು ಪುತ್ತೂರು ತಾಲೂಕಿನ ನರಿಮೊಗರು ಎಂಬಲ್ಲಿರುವ ಬಿಂದು ಪ್ಯಾಕ್ಟರಿ  ಬಳಿ ನಿಲ್ಲಿಸಿದ್ದ ಲಾರಿಯ ಕ್ಯಾಬಿನ್ ಟ್ರವರ್‍ನಲ್ಲಿ ಇರಿಸಿದ್ದ ರೂ. 1.50 ಲಕ್ಷ ನಗದು ಕಳವಾದ ಮತ್ತು ಅದೇ ಲಾರಿಯ ಕ್ಲೀನರ್ ಆಂಧ್ರಪ್ರದೇಶದ ಅನಂತಪುರಂ ತಾಂಡಪತ್ರಿ ಎಡಕ್ಕಿಮಂಡಲ ಪೆನ್ನೆಪಳ್ಳಿ ನಿವಾಸಿ ನಾರಾಯಣ ಅವರ ಪುತ್ರ ರಾಜು (35) ಎಂಬಾತ ನಾಪತ್ತೆಯಾಗಿರುವ ಕುರಿತು ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಲಾರಿ ಚಾಲಕ ವೆಂಕಟರಾಮುಲು ಎಂಬವರು ದೂರು ನೀಡಿದ್ದರು.

ಕಳವು ಮತ್ತು ನಾಪತ್ತೆ ಪ್ರಕರಣವನ್ನು ದಾಖಲಿಸಿಕೊಂಡ ಪುತ್ತೂರು ಪೊಲೀಸರು ತನಿಖೆ ಕೈಗೆತ್ತಿಕೊಂಡಾಗ ನಾಪತ್ತೆಯಾದ ರಾಜು ಅವರೇ ನಗದುನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿತ್ತು, ಆರೋಪಿಯನ್ನು ಪತ್ತೆ ಮಾಡಲು ಪುತ್ತೂರು ಪೊಲೀಸರು ಕಳೆದ ಹಲವಾರು ತಿಂಗಳಿನಿಂದ ಆಂಧ್ರಪದೇಶದಲ್ಲಿ ಟಿಕಾಣಿ ಹೂಡಿ ಕಾರ್ಯಾಚರಣೆ ನಡೆಸಿದ್ದರು. ಆದರೆ ಆರೋಪಿ ಅ.21ರಂದು ರಾತ್ರಿ ಮೈಸೂರಿನಿಂದ ಕೇರಳಕ್ಕೆ ಹೋಗುವ ಮಾಹಿತಿ ಅರಿತ ಪೊಲೀಸರು ಆರೋಪಿ ರಾಜು ಅವರನ್ನು ಮೈಸೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಕಾಂತ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ದಿನಕರ ಶೆಟ್ಟಿ ಮತ್ತು ಪುತ್ತೂರು ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಅವರ ನಿರ್ದೇಶನದಂತೆ ಪುತ್ತೂರು ನಗರ ಪೊಲೀಸ್ ಠಾಣೆಯ ಪ್ರೊಬೆಷನರ್ ಎಸ್.ಐ ಆಂಜನೇಯ ರೆಡ್ಡಿ, ಸಿಬಂದಿಗಳಾದ ಜಗದೀಶ್, ರಕ್ಷಿತ್, ಡಿವೈಎಸ್ಪಿ ಅವರ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News