ಮಂಗಳೂರು: ಸಮುದ್ರದಲ್ಲಿ ನಾಪತ್ತೆಯಾಗಿದ್ದ ಮೀನುಗಾರನ ರಕ್ಷಣೆ

Update: 2019-10-23 15:34 GMT

ಮಂಗಳೂರು, ಅ.23: ಪ್ರಕ್ಷುಬ್ಧಗೊಂಡ ಅರಬ್ಬಿ ಸಮುದ್ರದ ಭಾರೀ ಅಲೆಗಳ ಅಬ್ಬರದಲ್ಲಿ ಸಿಲುಕಿ 12 ಗಂಟೆಗಳ ಕಾಲ ಹೋರಾಟ ನಡೆಸಿದ ಮೀನುಗಾರನನ್ನು ಕರಾವಳಿ ರಕ್ಷಣಾ ಪಡೆಯು ಬುಧವಾರ ಸಂಜೆ ರಕ್ಷಣೆ ಮಾಡಿದೆ.

ಒಡಿಶಾ ಮೂಲದ ಗೋರಯ್ಯ ರಾವ್ (33) ರಕ್ಷಣೆಗೊಳಗಾದ ಮೀನುಗಾರ.

‘ಶಿಯೋನಲ್ ಏಂಜೆಲ್’ ಶಿಪ್ ಮಂಗಳೂರು ಬಂದರ್‌ನಿಂದ ಬುಧವಾರ ಬೆಳಗ್ಗೆ ಮೀನುಗಾರಿಗೆ ತೆರಳಿತ್ತು. ಶಿಪ್ ಮಲ್ಪೆಯಿಂದ 10 ನಾಟಿಕಲ್ ಮೈಲ್ ದೂರದಲ್ಲಿದ್ದ ವೇಳೆ ಮೀನುಗಾರ ಗೋರಯ್ಯ ನಸುಕಿನ ಜಾವ 3 ಗಂಟೆ ಸುಮಾರಿಗೆ ನಾಪತ್ತೆಯಾಗಿದ್ದರು.

ಮಲ್ಪೆಯ ಕರಾವಳಿ ಪೊಲೀಸ್ ಪಡೆಯ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಮೀನುಗಾರನೋರ್ವ ನಾಪತ್ತೆಯಾಗಿರುವ ಸಂದೇಶ ರವಾನೆಯಾಗಿದೆ. ಕೂಡಲೇ ಕಾರ್ಯಾಚರಣೆಗೆ ಮುಂದಾದ ಭಾರತೀಯ ಕರಾವಳಿ ರಕ್ಷಣಾ ಪಡೆಯ ‘ಸಾವಿತ್ರಿಬಾಯಿ ಫುಲೆ’ ಶಿಪ್ ಮೀನುಗಾರನನ್ನು ಸಂಜೆ 4 ಗಂಟೆಗೆ ರಕ್ಷಣೆ ಮಾಡಿದೆ.

ಸಮುದ್ರದಲ್ಲಿ ಸಿಲುಕಿ ನಿತ್ರಾಣಗೊಂಡಿದ್ದ ಮೀನುಗಾರನಿಗೆ ಪ್ರಥಮ ಚಿಕಿತ್ಸೆ ನೀಡಿ, ಆಹಾರ ನೀಡಲಾಯಿತು. ಮೀನುಗಾರನನ್ನು ಮಂಗಳೂರಿನ ಎನ್‌ಎಂಪಿಟಿಗೆ ಕರೆತಂದು, ಕರಾವಳಿ ರಕ್ಷಣಾ ಪಡೆಗೆ ಹಸ್ತಾಂತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News