ಚೆನ್ನಮ್ಮರ ದೇಶ ಪ್ರೇಮ, ದೈರ್ಯ ಇತರರಿಗೆ ಮಾದರಿ:ಯು.ಸಿ ನಿರಂಜನ್

Update: 2019-10-23 16:16 GMT

ಉಡುಪಿ, ಅ.23: ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಣಿಪಾಲದಲ್ಲಿರುವ ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆಯನ್ನು ಜಿಲ್ಲಾಧಿಕಾರಿ ಜಿ. ಜಗದೀಶ್ ಕಿತ್ತೂರು ರಾಣಿ ಚೆನ್ನಮ್ಮ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಕುರಿತು ಉಪನ್ಯಾಸ ನೀಡಿದ ಉಡುಪಿ ಚಿತ್ರಕಲಾ ಮಂದಿರದ ನಿರ್ದೇಶಕ ಯು.ಸಿ.ನಿರಂಜನ್, ಬ್ರಿಟಿಷರ ವಿರುದ್ಧ ಸ್ವಾತಂತ್ರಕ್ಕಾಗಿ ಹೋರಾಡಿದ ರಾಣಿ ಚೆನ್ನಮ್ಮರ ದೇಶಪ್ರೇಮ ಇತರರಿಗೆ ಮಾದರಿಯಾಗಿದೆ. ಚೆನ್ನಮ್ಮ, ಬ್ರಿಟಿಷರ ತೆರಿಗೆ ಸಂಗ್ರಹ ಪದ್ದತಿ ಹಾಗೂ ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯನ್ನು ವಿರೋಧಿಸಿ ಸ್ವಾಭಿಮಾನದ ಸಮಾಜಕ್ಕೆ ಶ್ರಮಿಸಿದ್ದರು ಎಂದರು.

ಎಳೆ ವಯಸ್ಸಿನಲ್ಲಿಯೇ ಬಿಲ್ವಿದ್ಯೆ, ಕುದುರೆ ಸವಾರಿಗಳನ್ನು ಕರಗತ ಮಾಡಿ ಕೊಂಡು ಎದುರಾಳಿಗಳೊಂದಿಗೆ ಎದೆಗುಂದದೆ ಹೋರಾಡಿದ ಇವರ ಧೈರ್ಯ ಇತರರಿಗೆ ಮಾರ್ಗದರ್ಶನ ನೀಡಿದೆ. ಚೆನ್ನಮ್ಮರ ಕಿತ್ತೂರಿನ ಕ್ರಾಂತಿಯ ನಂತರ ನಡೆದ ರಾಷ್ಟ್ರವ್ಯಾಪಿ ಸ್ವಾತಂತ್ಯ ಸಂಗ್ರಾಮ ಮತ್ತು ಕ್ರಾಂತಿಗೆ ಇದು ಪ್ರೇರಣೆಯನ್ನು ನೀಡಿತ್ತು ಎಂದು ಡಾ.ನಿರಂಜನ್ ನುಡಿದರು.

ಉತ್ತರ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಇಂದೂ ಜಾತ್ರೆ ಹಾಗೂ ಇನ್ನಿತರ ಸಭೆ ಸಮಾರಂಭಗಳಲ್ಲಿ ಚೆನ್ನಮ್ಮರ ಸಾಧನೆಯನ್ನು ಜನಪದ ಹಾಡುಗಳ ಮೂಲಕ ಜನರಿಗೆ ತಲುಪಿಸುವ ಕೆಲಸ ನಡೆಯುತ್ತಿದೆ. ಕಿತ್ತೂರು ಕ್ರಾಂತಿಯ ನೆನಪಿಗಾಗಿ ಪ್ರತಿ ವರ್ಷ ಕಿತ್ತೂರು ಉತ್ಸವವನ್ನು ನಡೆಸಲಾಗುತ್ತಿದೆ. ಧೈರ್ಯ, ಸ್ಥೈರ್ಯಕ್ಕೆ ಹೆಸರಾಗಿದ್ದ ಕಿತ್ತೂರು ಚೆನ್ನಮ್ಮರ ಯಶೋಗಾಥೆಯ ನೆನಪಿಗಾಗಿ ಕಿತ್ತೂರು ಶೌರ್ಯ ಪ್ರಶಸ್ತಿ ನೀಡಲಾಗುತ್ತಿದೆ. ವೀರರಾಣಿಯ ನೆನಪಿನಲ್ಲಿ ಕಿತ್ತೂರಿನಲ್ಲಿ ಸೈನಿಕ ಶಾಲೆಯನ್ನು ಸಹ ತೆರೆಯಲಾಗಿದೆ ಎಂದರು.

ಉಡುಪಿ ಜಿಲ್ಲಾ ಬಸವ ಸಮಿತಿ ಅಧ್ಯಕ್ಷ ಜಿ.ಎಂ ಪಾಟೀಲ್, ಚಿತ್ರಕಲಾ ಮಂದಿರದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕನ್ನಡ ಮತ್ತುಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಸ್ವಾಗತಿಸಿ,ಪೂರ್ಣಿಮಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News