ರಸಗೊಬ್ಬರಗಳ ಬಳಕೆಗೆ ಅರಿವು ಅಗತ್ಯ: ಚಂದ್ರಶೇಖರ ನಾಯ್ಕ

Update: 2019-10-23 16:25 GMT

ಉಡುಪಿ, ಅ.23: ಕೃಷಿಯಲ್ಲಿ ಒಳ್ಳೆಯ ಇಳುವರಿ ಪಡೆಯಲು ಸಸ್ಯಗಳಿಗೆ 16 ಪೋಷಕಾಂಶವನ್ನು ಒದಗಿಸುವ ಅಗತ್ಯವಿದೆ ಎಂದು ಜಿಲ್ಲಾ ಕೃಷಿ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ ನಾಯ್ಕ ಹೇಳಿದ್ದಾರೆ.

ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ಶತಮಾನೋತ್ಸವದ ಅಂಗವಾಗಿ ಮಂಗಳವಾರ ನಡೆದ ‘ರಸಗೊಬ್ಬರಗಳ ಬಳಕೆಗೆ ಅರಿವು’ ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಸಾವಯವ ಗೊಬ್ಬರ ಮತ್ತು ರಸಗೊಬ್ಬರ ಎರಡನ್ನು ಸಮತೋಲನವಾಗಿ ಬಳಕೆ ಮಾಡಬೇಕು ಹಾಗೂ ಸಸ್ಯಕ್ಕನುಗುಣವಾಗಿ ರಸಗೊಬ್ಬರವನ್ನು ಯಾವ ರೀತಿ ಆಯ್ಕೆ ಮಾಡಬೇಕು ಎನ್ನುವುದನ್ನು ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹ ವಿಸ್ತರಣಾ ಮತ್ತು ಸಹ ಸಂಶೋಧನಾ ನಿರ್ದೇಶಕ ಡಾ. ಎಸ್. ಯು. ಪಾಟೀಲ್ ಮಾತನಾಡಿ, ರಸಗೊಬ್ಬರಗಳನ್ನು ಮಣ್ಣು ಹಿಡಿದಿಟ್ಟುಕೊಳ್ಳಬೇಕಾದರೆ ಮಣ್ಣಿಗೆ ಲಘು ಪೋಷಕಾಂಶವನ್ನು ದೊರಕಿಸುವುದು ತುಂಬಾ ಮುಖ್ಯ. ಕೃಷಿಯಲ್ಲಿ ಉತ್ತಮ ಇಳುವರಿ ಕಾಣಲು ಯಾವ ಪೋಷಕಾಂಶವನ್ನು ಎಷ್ಟು ಪ್ರಮಾಣ ದಲ್ಲಿ ಮಣ್ಣಿಗೆ ಸೇರಿಸಬೇಕು ಎನ್ನುವ ುರಿತು ಸಮಗ್ರ ಮಾಹಿತಿ ನೀಡಿದರು.

ಬ್ರಹ್ಮಾವರ ವಲಯ ಕೃಷಿ ಮತ್ತು ಸಂಶೋಧನಾ ಕೇಂದ್ರದ ವಿಜ್ಞಾನಿ ವಿ. ಆರ್.ವಿನೋದ್ (ಮಣ್ಣು ಮತ್ತು ನೀರು ಸಂರಕ್ಷಣೆ) ಬೆಳೆಯಲ್ಲಿ ಪರಿಪೂರ್ಣ ಇಳುವರಿ ಕಾಣಲು ರಸಗೊಬ್ಬರದ ಸರಿಯಾದ ಆಯ್ಕೆ ಅವಶ್ಯಕವಾಗಿದೆ. ಕೇವಲ ಸಾವಯವ ಗೊಬ್ಬರದಿಂದ ಸಸ್ಯಕ್ಕೆ ಪರಿಪೂರ್ಣ ಪೋಷಕಾಂಶ ದೊರಕಿಸುವುದು ಸಾಧ್ಯವಿಲ್ಲ ಎಂದರು.

ಕೇಂದ್ರದ ಹಿರಿಯ ಕ್ಷೇತ್ರ ಪಾಲಕ ಡಾ. ಶಂಕರ್ ಎಸ್.ಎಂ. ಮಾತನಾಡಿ, ಭಾರತ ದೇಶ ರಸಗೊಬ್ಬರ ಬಳಕೆಯಲ್ಲಿ 3ನೇ ಸ್ಥಾನದಲ್ಲಿದೆ ಹಾಗೂ ಹಟ್ಟಿಗೊಬ್ಬರ ಮತ್ತು ರಸಗೊಬ್ಬರ ಎರಡನ್ನು ಸಮ ಪ್ರಮಾಣಲ್ಲಿ ಬಳಸಬೇಕು ಎಂದು ತಿಳಿಸಿದರು. ಕೆವಿಕೆ ಬ್ರಹ್ಮಾವರದ ಹಿರಿಯ ವಿಜ್ಞಾನಿಮತ್ತು ಮುಖ್ಯಸ್ಥ ಡಾ.ಬಿ. ಧನಂಜಯ ಅವರು ರಸಗೊಬ್ಬರದ ಬಳಕೆ ಬಗ್ಗೆ ಮಾಹಿತಿ ನೀಡಿದರು. ವಿಜ್ಞಾನಿ ಡಾ. ಜಯ ಪ್ರಕಾಶ್ ಆರ್ (ಮಣ್ಣು ವಿಜ್ಞಾನ) ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವಿಜ್ಞಾನಿ ಡಾ.ಸಚಿನ್ ಯು.ಎಸ್ (ಕೀಟಶಾಸ್ತ್ರ) ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News