‘ಟೈಮ್ಸ್ ಆಫ್ ಇಂಡಿಯಾ’ ಪತ್ರಕರ್ತೆಯನ್ನು ತರಾಟೆಗೆ ತೆಗೆದುಕೊಂಡ ಸಂಸದೆ ಇಲ್ಹನ್ ಉಮರ್

Update: 2019-10-23 18:50 GMT

ವಾಷಿಂಗ್ಟನ್, ಅ. 23: ಜಮ್ಮು ಹಾಗೂ ಕಾಶ್ಮೀರದ ಪ್ರಸ್ತುತ ಪರಿಸ್ಥಿತಿ ಕುರಿತ ಭಾರತೀಯ ಸರಕಾರದ ಪರವಾಗಿ ‘ಅಸ್ಪಷ್ಟ’ ಪ್ರತಿಪಾದನೆ ಮಾಡುತ್ತಿರುವ ‘ಟೈಮ್ಸ್ ಆಫ್ ಇಂಡಿಯಾ’ದ ಪತ್ರಕರ್ತೆಯನ್ನು ಅಮೆರಿಕದ ಕಾಂಗ್ರೆಸ್ ಸಂಸದೆ ಇಲ್ಹನ್ ಉಮರ್ ಮಂಗಳವಾರ ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ಸಂಸದೆ ತನ್ನ ವೃತ್ತಿಪರ ಪ್ರಾಮಾಣಿಕತೆ ಪ್ರಶ್ನಿಸಿರುವುದು ಟೈಮ್ಸ್ ಆಫ್ ಇಂಡಿಯಾದ ಪತ್ರಕರ್ತೆ ಆರತಿ ಟಿಕೂ ಸಿಂಗ್‌ಗೆ ಆಕ್ರೋಶಗೊಳ್ಳುವಂತೆ ಮಾಡಿತು.

ಅಮೆರಿಕ ಕಾಂಗ್ರೆಸ್‌ನ ಸಂಸದೀಯ ಉಪ ಸಮಿತಿಯ ಆಲಿಕೆಯಲ್ಲಿ ಸಿಂಗ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಉಮರ್, ಏನು ನಡೆಯುತ್ತಿದೆ ಎಂಬ ಬಗ್ಗೆ ಸತ್ಯ ಪತ್ತೆ ಹಚ್ಚುವುದು ಹಾಗೂ ಅದನ್ನು ಸಾರ್ವಜನಿಕರಿಗೆ ತಿಳಿಯಲು ವರದಿ ಮಾಡುವುದು ಪತ್ರಕರ್ತರ ಕೆಲಸ ಎಂದರು. ಕಾಶ್ಮೀರದ ಪ್ರಸಕ್ತ ಪರಿಸ್ಥಿತಿ ಬಗ್ಗೆ ಸಿಂಗ್ ಅವರ ‘ವರದಿಯ ಆಯಾಮ’ವನ್ನು ಪ್ರಶ್ನಿಸಿದ ಉಮರ್, ‘‘ನಿಮ್ಮ ಆಯಾಮದ ಪ್ರಕಾರ ಕಾಶ್ಮೀರದಲ್ಲಿ ಸಮಸ್ಯೆ ಸೃಷ್ಟಿಯಾಗಲು ಕಾರಣ ಭಯೋತ್ಪಾದಕರು. ಅವರು ಮಾತ್ರ ಭಾರತದಿಂದ ದೂರವಾಗಲು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರಿಗೆ ಪಾಕಿಸ್ತಾನ ಬೆಂಬಲಿಸುತ್ತಿದೆ ಎಂದಿದ್ದೀರಿ’’ ಎಂದರು. ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಭಾರತ ಸರಕಾರ ರದ್ದುಗೊಳಿಸಿರುವುದು ಮಾನವ ಹಕ್ಕುಗಳ ರಕ್ಷಣೆಗೆ ಉತ್ತಮವಾಯಿತು ಎಂದು ಅವಿಶ್ವಸನೀಯ ಅಸ್ಪಷ್ಟ ಪ್ರತಿಪಾದನೆ ಮಾಡಿದ್ದೀರಿ. ಸಿಂಗ್ ಅವರೇ, ವಿಧಿ 370 ರದ್ದು ಮಾನವ ಹಕ್ಕಿನ ರಕ್ಷಣೆಗೆ ಉತ್ತಮವಾಗಿದ್ದರೆ, ಅದು ರಹಸ್ಯವಾಗಿ ನಡೆಯುತ್ತಿರಲಿಲ್ಲ’’ ಎಂದರು.

ಆಲಿಕೆಯಲ್ಲಿ ಭಾರತ ಸರಕಾರದಿಂದ ನಿಯೋಜಿತರಾಗಿದ್ದ ಆರತಿ ಟಿಕೂ ಸಿಂಗ್ ಪ್ರತಿಕ್ರಿಯಿಸಿ, ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಿಂದ ಹಿಡಿದು ಗೋಮಾಂಸದ ಕಾರಣಕ್ಕೆ ಥಳಿಸಿ ಹತ್ಯೆಗೈಯುತ್ತಿರುವ ವರೆಗಿನ ವಿವಿಧ ವಿಷಯಗಳ ಬಗ್ಗೆ ನಾನು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದೇನೆ. ಉಮರ್ ಅವರು ನನ್ನ ಮೇಲೆ ಇಂತಹ ಆರೋಪ ಮಾಡಿರುವುದು ಖಂಡನೀಯ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News