×
Ad

ದಕ್ಷಿಣ ಕನ್ನಡ ಜಿಲ್ಲಾ‌ ಎಸ್ಪಿ ಕಚೇರಿ ಸ್ಥಳಾಂತರ ಬಗ್ಗೆ ಶೀಘ್ರ ನಿರ್ಧಾರ: ಗೃಹಸಚಿವ ಬಸವರಾಜ್ ಬೊಮ್ಮಾಯಿ

Update: 2019-10-24 13:03 IST

ಬಂಟ್ವಾಳ, ಅ.24: ದಕ್ಷಿಣ ಕನ್ನಡ ಜಿಲ್ಲಾ‌ ಎಸ್ಪಿ ಕಚೇರಿ ಸ್ಥಳಾಂತರದ ಬಗ್ಗೆ ಶೀಘ್ರದಲ್ಲೇ ‌ಬೆಂಗಳೂರಿನಲ್ಲಿ ಸಭೆ ನಡೆಸಿ ಸ್ಪಷ್ಟ ತೀರ್ಮಾನ ಕೈಗೊಳ್ಳುವುದಾಗಿ ಕರ್ನಾಟಕ ರಾಜ್ಯ ಗೃಹಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಬಂಟ್ವಾಳ‌ ನಿರೀಕ್ಷಣಾ  ಮಂದಿರದಲ್ಲಿ ಪಶ್ಚಿಮವಲಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು.

ಜಿಲ್ಲಾ ಎಸ್ಪಿ ಕಚೇರಿ ಸ್ಥಳಾಂತರ ಬಂಟ್ವಾಳಕ್ಕೋ ಅಥವಾ ಪುತ್ತೂರಿಗೋ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,ಈ ಕುರಿತಾಗಿ  ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ನಡೆಸುವುದಾಗಿ  ತಿಳಿಸಿದರು.

ಬಂಟ್ವಾಳ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಬಂಟ್ವಾಳ ನಗರ ಹಾಗೂ ಗ್ರಾಮಾಂತರಕ್ಕೆ ಪ್ರತ್ಯೇಕ ವೃತ್ತ ನಿರೀಕ್ಷಕರನ್ನು ನೇಮಿಸಲಾಗುವುದು ಎಂದರು.

ಕರ್ನಾಟಕದಲ್ಲೇ ಅತ್ಯಂತ ಹೆಚ್ಚು ಪೊಲೀಸ್ ಕ್ವಾಟ್ರಸ್ ಇದ್ದು, ಶೇ.60ರಷ್ಟು ಇರುವ ಕ್ವಾಟ್ರಸ್ ಗಳ ಸಂಖ್ಯೆಯನ್ನು ಮುಂದಿನ ಮೂರು ವರ್ಷಗಳಲ್ಲಿ ಶೇ.80ಕ್ಕೆ ಏರಿಸುವ ಗುರಿ ಇರಿಸಲಾಗಿದೆ ಎಂದವರು ಪ್ರಶ್ನೆಯೊಂದಕ್ಕೆ‌ ಉತ್ತರಿಸಿದರು.

ಶಾಸಕ ಯು.ರಾಜೇಶ್ ನಾಯ್ಕ್, ಪಶ್ಚಿಮ ವಲಯದ ಐಜಿಪಿ ಅರುಣ್ ಚಕ್ರವರ್ತಿ, ದ.ಕ. ಜಿಲ್ಲಾ ಎಸ್ಪಿ ಲಕ್ಷ್ಮೀಪ್ರಸಾದ್, ಉಡುಪಿ ಜಿಲ್ಲಾ ಎಸ್ಪಿ ನಿಶಾಜೇಮ್ಸ್, ಚಿಕ್ಕಮಗಳೂರು ಎಸ್ಪಿ ಹರೀಶ್ ಪಾಂಡೆ, ಕಾರವಾರ ಎಸ್ಪಿ ಶಿವಪ್ರಕಾಶ್, ಪುತ್ತೂರು ವಿಭಾಗದ ಡಿವೈಎಸ್ಪಿ ದಿನಕರ ಶೆಟ್ಟಿ, ಬಂಟ್ವಾಳ ಸಿಐ ನಾಗರಾಜ್ ಟಿ.ಡಿ. ಸಹಿತ ವಿವಿಧ ಠಾಣೆಯ ಪಿಎಸ್ಐ ಗಳು ಮತ್ತು ಬಂಟ್ವಾಳ ಕೇತ್ರ ಬಿಜೆಪಿ ಸಮಿತಿಯ ಅಧ್ಯಕ್ಷ ದೇವದಾಸ ಶೆಟ್ಟಿ,ಪುರಸಭಾ ಸದಸ್ಯ ಗೋವಿಂದ ಪ್ರಭು, ರಾಜ್ಯ ಸಹ ವಕ್ತಾರೆ ಸುಲೋಚನಾ ಭಟ್ ಜಿ.ಕೆ. ಪ್ರ.ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ತಾಪಂ ಸದಸ್ಯ ಪ್ರಭಾಕರ ಪ್ರಭು, ಪುರುಷೋತ್ತಮ ಶೆಟ್ಟಿ, ಉದಯಕುಮಾರ್ ರಾವ್ ಬಂಟ್ವಾಳ, ರಮಾನಾಥ ರಾಯಿ, ಸುದರ್ಶನ್ ಬಜ ಮತ್ತಿತರರು ಉಪಸ್ಥಿತರಿದ್ದರು.

ಇದಕ್ಕು ಮೊದಲು ಗೃಹ ಸಚಿವರು ಪೊಲೀಸ್ ಇಲಾಖೆಯಿಂದ ಗೌರವ ವಂದನೆ ಸ್ವೀಕರಿಸಿದರು. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಚುನಾವಣೆಯ ಹಿನ್ನೆಲೆಯಲ್ಲಿ ಗೃಹ ಸಚಿವರು ಪೊಲೀಸ್ ಪಶ್ಚಿಮ ವಲಯ ವ್ಯಾಪ್ತಿಯ ಅಧಿಕಾರಿಗಳ ಪ್ರಗತಿ ಪರಿಶೀಲನೆಯನ್ನು ಬಂಟ್ವಾಳ ಪ್ರವಾಸಿಮಂದಿರದಲ್ಲಿ ನಡೆಸಿದರು. ಇದೇ ಮೊದಲಬಾರಿಗೆ ಬಂಟ್ವಾಳಕ್ಕಾಗಮಿಸಿದ ಗೃಹಸಚಿವರನ್ನು ಶಾಸಕ ಯು.ರಾಜೇಶ್ ನಾಯ್ಕ್ ಹಾಗೂ ತಹಶೀಲ್ದಾರ್ ರಶ್ಮಿ ಎಸ್.ಆರ್. ಸ್ವಾಗತಿಸಿದರು.

ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಈ ಹಿಂದೆ ಅಧಿವೇಶನದ ಸಂದರ್ಭದಲ್ಲಿ ರಾಜ್ಯ ಗೃಹಸಚಿವರಾದ ಬಸವರಾಜ್ ಬೊಮ್ಮಾಯಿಯವರಿಗೆ ಬಂಟ್ವಾಳ ನಗರ ಠಾಣೆ ಮೇಲ್ದರ್ಜೆಗೇರಿಸಲು ಮನವಿ ಸಲ್ಲಿಸಿದ್ದು, ಈ ದಿನ ರಾಜ್ಯ ಗೃಹಸಚಿವರು ಬಂಟ್ವಾಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಚಿವರ ಗಮನಕ್ಕೆ ಮತ್ತೊಮ್ಮೆ ಈ ವಿಚಾರ ತಂದಿದ್ದು ಗೃಹ ಸಚಿವರು ಬಂಟ್ವಾಳ ನಗರ ಠಾಣೆಯನ್ನು ಮೇಲ್ದರ್ಜೆಗೇರಿಸಲು ಒಪ್ಪಿದ್ದು ಶೀಘ್ರವಾಗಿ ಜಾರಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಬಂಟ್ವಾಳ ನಗರ ಠಾಣೆ ಮೇಲ್ದರ್ಜೆಗೊಂಡಲ್ಲಿ ಹೆಚ್ಚುವರಿ ವೃತ್ತ ನೀರೀಕ್ಷಕ  ಹುದ್ದೆ, ಸಿಬ್ಬಂದಿ ವರ್ಗದಲ್ಲಿ ಹೆಚ್ಚಳ, ಇಲಾಖೆಯ ಸೌಲಭ್ಯಗಳು ಸಿಗಲಿದ್ದು ಅತಿಸೂಕ್ಷ್ಮ ಪ್ರದೇಶವಾದ ಬಂಟ್ವಾಳದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ನೆರವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News