ಮಂಜೇಶ್ವರ: ಯುಡಿಎಫ್ ಅಭ್ಯರ್ಥಿ ಎಂ.ಸಿ.ಖಮರುದ್ದೀನ್ ರಿಗೆ ಭರ್ಜರಿ ಜಯ

Update: 2019-10-24 09:05 GMT

ಕಾಸರಗೋಡು, ಅ.24: ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಯುಡಿಎಫ್ ಅಭ್ಯರ್ಥಿ ಎಂ.ಸಿ.ಖಮರುದ್ದೀನ್ ಭರ್ಜರಿ ಗೆಲುವು ಸಾಧಿಸಿ ಮೊದಲ ಬಾರೀ ವಿಧಾನಸಭೆ ಪ್ರವೇಶಿಸಿದ್ದಾರೆ.

 ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ರವೀಶ್ ತಂತ್ರಿ ಕುಂಟಾರು ಅವರನ್ನು 7,923 ಮತಗಳ ಅಂತರದಿಂದ ಸೋಲಿಸಿದ ಖಮರುದ್ದೀನ್, ಎಲ್‌ಡಿಎಫ್ ಅನ್ನು ಮತ್ತೊಮ್ಮೆ ತೃತೀಯ ಸ್ಥಾನಕ್ಕೆ ತಳ್ಳಿದ್ದಾರೆ.

ಆರಂಭದಲ್ಲೇ ಮುನ್ನಡೆ ಸಾಧಿಸಿದ್ದ ಖಮರುದ್ದೀನ್ ಕೊನೆಯವರೆಗೂ ಅದನ್ನು ಕಾಯ್ದುಕೊಂಡರಲ್ಲದೇ, ಹಂತ ಹಂತವಾಗಿ ಮುನ್ನಡೆಯನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿದರು. ಅಂತಿಮವಾಗಿ 65,407 ಮತಗಳನ್ನು ಗಳಿಸುವ ಮೂಲಕ 7,923 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಅವರ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ರವೀಶ್ ತಂತ್ರಿ 57,484 ಮತಗಳನ್ನು ಗಳಿಸಿದ್ದರೆ, ಎಲ್‌ಡಿಎಫ್ ಅಭ್ಯರ್ಥಿ ಎಂ.ಶಂಕರ ರೈ 38,233 ಮತಗಳೊಂದಿಗೆ ತೃತೀಯ ಸ್ಥಾನಿಯಾದರು.

2016ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಂಜೇಶ್ವರದಲ್ಲಿ ಮತಗಳ ಅಲ್ಪ ಅಂತರದಿಂದ ಗೆಲವು ಸಾಧಿಸಿದ್ದ ಯುಡಿಎಫ್ ಈ ಸಲ ಭಾರೀ ಅಂತರದಿಂದ ಜಯಿಸುವ ಮೂಲಕ ಪ್ರಬಲವಾಗಿ ಹೊರಹೊಮ್ಮಿದೆ. ಕಳೆದ ಬಾರಿ ಪಿ.ಬಿ.ಅಬ್ದುರ್ರಝಾಕ್ ಅವರು ಬಿಜೆಪಿಯ ಕೆ. ಸುರೇಂದ್ರನ್ ವಿರುದ್ಧ ಕೇವಲ 89 ಮತಗಳ ಅಲ್ಪ ಅಂತರದಿಂದ ಗೆಲುವು ಸಾಧಿಸಿದ್ದರು.

ಶಾಸಕರಾಗಿದ್ದ ಪಿ.ಬಿ.ಅಬ್ದುರ್ರಝಾಕ್ ಅವರ ನಿಧನದಿಂದ ತೆರವಾಗಿದ್ದ ಈ ಸ್ಥಾನಕ್ಕೆ ಅ.21ರಂದು ಉಪಚುನಾವಣೆ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News