×
Ad

ಉಡುಪಿ: ಬಿಜೆಪಿಯ ‘ಗಾಂಧಿ ಸಂಕಲ್ಪ ಯಾತ್ರೆ’ಯಲ್ಲಿ ವಿದ್ಯಾರ್ಥಿಗಳದೇ ಜಾಥ

Update: 2019-10-24 19:30 IST

 ಉಡುಪಿ, ಅ. 24: ಮಹಾತ್ಮಗಾಂಧಿಯವರ 150ನೇ ಜನ್ಮ ದಿನಾಚರಣೆ ಪ್ರಯುಕ್ತ ಕೇಂದ್ರ ಸರಕಾರದ ನಿರ್ದೇಶನದಂತೆ ದೇಶಾದ್ಯಂತ ನಡೆಯುತ್ತಿರುವ ‘ಗಾಂಧಿ ಸಂಕಲ್ಪ ಯಾತ್ರೆ’ಯು ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಉಡುಪಿ ಶಾಸಕ ಕೆ.ರಘುಪತಿ ಭಟ್ ಅವರ ನೇೃತ್ವದಲ್ಲಿ ಗುರುವಾರ ನಡೆಯಿತು.

ಮಹಾತ್ಮಾ ಗಾಂಧಿ ಅವರ ಸಂದೇಶವನ್ನು ಜನರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ‘ಗಾಂಧಿ ಸಂಕಲ್ಪ ಯಾತ್ರೆ’ ಕಾಲ್ನಡಿಗೆ ಜಾಥ ನಡೆಯುತ್ತಿದೆ. ಇಂದಿನ ಜಾಥದಲ್ಲಿ ಉಡುಪಿ ನಗರದ ಹಲವು ಪ್ರೌಢ ಶಾಲೆಗಳ ಸಾವಿರಾರು ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ನಗರದ ಅಜ್ಜರಕಾಡಿನ ಭುಜಂಗ ಪಾರ್ಕಿನಲ್ಲಿರುವ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡುವುದರೊಂದಿಗೆ ಗಾಂಧಿ ಸಂಕಲ್ಪ ಯಾತ್ರೆಗೆ ಚಾಲನೆ ನೀಡಲಾಯಿತು. ಸಂಕಲ್ಪ ಯಾತ್ರೆ ಜೋಡುಕಟ್ಟೆ, ಕೆ.ಎಂ.ಮಾರ್ಗ, ಸರ್ವಿಸ್ ಬಸ್‌ನಿಲ್ದಾಣ, ಗಾಂಧಿ ಪ್ರತಿಮೆ, ಸಿಟಿ ಬಸ್ ನಿಲ್ದಾಣ, ಕಲ್ಸಂಕ ಮಾರ್ಗವಾಗಿ ಸಾಗಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಸ್ಥಳದಲ್ಲಿ ಮುಕ್ತಾಯಗೊಂಡಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುಜರಾಯಿ, ಮೀನುಗಾರಿಕೆ ಮತ್ತು ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ‘ಸಮಾಜದ ಎಲ್ಲ ವರ್ಗದವರು ಸೇರಿ ಜಾಥವನ್ನು ಯಶಸ್ವಿಗೊಳಿಸಬೇಕು’ ಎಂದರು.

ರಾಜಕೀಯ ಹೊರತಾದ ವ್ಯಕ್ತಿತ್ವ: ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕಾಲ್ನಡಿಗೆ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ,ಸ್ವಾತಂತ್ರದ ಅನಂತರ ಮಹಾತ್ಮಾ ಗಾಂಧೀಜಿ ಅವರು ಒಂದು ಪಕ್ಷದ ಚಿಹ್ನೆಗೆ ಸೀಮಿತವಾಗಿದ್ದರು. ಆದರೆ ಅವರದು ರಾಜಕೀಯ ಹೊರತಾದ ವ್ಯಕ್ತಿತ್ವ. ಗಾಂಧೀಜಿ ಅವರನ್ನು ರಾಜಕೀಯ ಕಪಿಮುಷ್ಟಿಯಿಂದ ಹೊರತರ ಬೇಕಾಗಿದೆ. ಅವರ ಸಂದೇಶಗಳು ಯುವಜನರಿಗೆ ಸ್ಫೂರ್ತಿ ಎಂದರು.

ಸ್ವಾತಂತ್ರ ಹೋರಾಟ ಸಂದರ್ಭದಲ್ಲಿ ದೇಶದ ಸಾಮಾಜಿಕ ಪಿಡುಗು ಹಾಗೂ ಅಸ್ಪಶ್ಯತೆಯನ್ನು ನಿರ್ಮೂಲನ ಮಾಡುವ ನಿಟ್ಟಿನಲ್ಲಿ ಸಾಕಷ್ಟು ಹೋರಾಟ ಮಾಡಿದ್ದಾರೆ. ಎಲ್ಲರೂ ಸಮಾನತೆಯಿಂದ ಬದುಕಬೇಕು ಎನ್ನುವ ಅವರ ಸಂದೇಶ ಇಂದಿಗೂ ಪ್ರಸ್ತುತವಾಗಿದೆ. ಉಪ್ಪಿನ ಸತ್ಯಾಗ್ರಹ ಸಂದರ್ಭದಲ್ಲಿ ಸ್ವದೇಶಿ ವಸ್ತು ಬಳಕೆ, ಖಾದಿ, ಗ್ರಾಮ ಗುಡಿಕೈಗಾರಿಕೆ ಹಾಗೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದರು ಎಂದು ಶೋಭಾ ನುಡಿದರು.

ಶಾಸಕ ಕೆ.ರಘುಪತಿ ಭಟ್, ಜಿಪಂ ಅಧ್ಯಕ್ಷ ದಿನಕರ್ ಬಾಬು, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ರಾಘವೇಂದ್ರ ಕಿಣಿ, ಸಂಧ್ಯಾ ರಮೇಶ್, ಕುಯಿಲಾಡಿ ಸುರೇಶ್ ನಾಯಕ್, ಗೀತಾಂಜಲಿ ಸುವರ್ಣ, ಶ್ರೀಶ ನಾಯಕ್, ಕುತ್ಯಾರ್ ನವೀನ್ ಶೆಟ್ಟಿ, ಪ್ರಭಾಕರ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News