×
Ad

ನದಿಪಾತ್ರ ಬದಲಾವಣೆಗೆ ಬ್ರೇಕ್ ಹಾಕಲು ತಡೆಗೋಡೆ: ಸಚಿವ ಬಸವರಾಜ್ ಬೊಮ್ಮಾಯಿ

Update: 2019-10-24 19:38 IST

ಮಂಗಳೂರು, ಅ.24: ಬೆಳ್ತಂಗಡಿಯ ಚಾರ್ಮಾಡಿ ತಪ್ಪಲಿನ ಗ್ರಾಮದಲ್ಲಿ ಪ್ರಾಕೃತಿಕ ವಿಕೋಪದಿಂದ ಭಾರೀ ನಷ್ಟವುಂಟಾಗಿದ್ದು, ಪ್ರಾಕೃತಿಕ ವಿಕೋಪವು ನದಿ ಪಾತ್ರದ ಬದಲಾವಣೆ ಮೂಲಕ ಆಘಾತ ನೀಡಿದೆ. ಇದನ್ನು ನಿಯಂತ್ರಿಸಲು ಮೃತ್ಯುಂಜಯ ಹೊಳೆಗೆ ಸುಮಾರು ಎರಡೂವರೆ ಕಿಲೋ ಮೀಟರ್ ಉದ್ದದ ಡೆಗೋಡೆ ನಿರ್ಮಿಸಲು ತಕ್ಷಣ ಮಂಜೂರಾತಿ ನೀಡಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ಇಂದು ಚಾರ್ಮಾಡಿಯ ಅರಣೆಪಾದೆ ಹಾಗೂ ಅಂತರ ಪ್ರದೇಶಗಳಿಗೆ ಭೇಟಿ ನೀಡಿ ಪ್ರವಾಹ ಸಂತ್ರಸ್ತರ ಜತೆ ಮಾತನಾಡಿದ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಇಲ್ಲಿನ ಸ್ಥಳೀಯರ ಜತೆ ಮಾತನಾಡಿದಾಗ ಶಾಶ್ವತ ಪರಿಹಾರದ ಬೇಡಿಕೆಯನ್ನು ನೀಡಿದ್ದಾರೆ. ಅದರಂತೆ ತಡೆಗೋಡೆ ಶಾಶ್ವತ ಪರಿಹಾರ ಒದಗಿಸಲಿದೆ ಎಂದರು. ಈ ಬಾರಿಯ ಮಳೆ ಪ್ರವಾಹದಿಂದಾಗಿ ಕೃಷಿ ಭೂಮಿಯಲ್ಲಿ ಹೂಳು ತುಂಬಿದೆ. ಹೆಚ್ಚಿನ ಕಡೆ ವಾಸ್ತವ್ಯ, ಕೃಷಿಯೇ ಕುರುಹು ಇಲ್ಲದಂತಾಗಿದೆ. ನದಿಯ ಎರಡು ಭಾಗದ 500ಮೀಟರ್ ವ್ಯಾಪ್ತಿಯುದ್ದಕ್ಕೂ ಹಾನಿಯಾಗಿದೆ. ದೊಡ್ಡ ಬಂಡೆ, ಮರಗಳು ಬಂದು ಸೇತುವೆಯಲ್ಲಿ ಅಡ್ಡಲಾಗಿ ನಿಲ್ಲುತ್ತಿವೆ. ಸರಕಾರ ಸಾಕಷ್ಟು ಪರಿಹಾರ ಒದಗಿಸಿದೆ ಎಂದು ಅವರು ಹೇಳಿದರು.

ಇಂದು ಗೃಹ ಇಲಾಖೆಗೆ ಸಂಬಂಧಿಸಿ ಐಜಿಪಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಜತೆ ಸಭೆ ನಡೆಸಿ, ಜಿಲ್ಲೆಯ ಕಾನೂನು ಸುವ್ಯವಸ್ಥೆ ಕುರಿತು ಚರ್ಚಿಸಲಾಗಿದೆ. 3 ವರ್ಷಗಳಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪರಿಣಾಮಕಾರಿಯಾಗಿ ಅಧಿಕಾರಿಗಳು ಕೆಲಸ ಮಾಡಿದ್ದಾರೆ ಎಂದು ಸಚಿವ ಬೊಮ್ಮಾಯಿ ಹೇಳಿದರು.

ಕರಾವಳಿ ತೀರದಲ್ಲಿ ಭದ್ರತೆಗೆ ಸಂಬಂಧಿಸಿ ಸಾಕಷ್ಟು ಸವಾಲುಗಳಿವೆ. ಈ ಪ್ರದೇಶ ಬಲಪಡಿಸಲು ಕರಾವಳಿ ಕಾವಲು ಪಡೆಗೆ ಬಲಪಡಿಸಲು ಹೆಚ್ಚುವರಿ ಸಿಬ್ಬಂದಿ ಸಹಿತ ಶಸ್ತ್ರಾಸ್ತ್ರ, ಬೋಟು ಸೇರಿದಂತೆ ಅಗತ್ಯತೆ ಕುರಿತು ಪತಿಸಾತಿವನೆ ಕಳುಹಿಸಲು ತಿಳಿಸಿದ್ದೇನೆ. ಆದಷ್ಟು ಬೇಗ ಅಗತ್ಯ ವ್ಯವಸ್ಥೆ ಮಾಡಲಾಗುವುದು. ಇದರ ಜತೆಗೆ ಹೊರರಾಜ್ಯಗಳಿಂದ ಬರುವ ಮಾದಕ ದ್ರವ್ಯಗಳ ನಿಯಂತ್ರಣದ ಹಿನ್ನೆಲೆಯಲ್ಲಿ ಉಡುಪಿ ಮತ್ತು ಮಂಗಳೂರಿನಲ್ಲಿ ಸೈಬರ್ ಎಕನಾಮಿಕ್ ಅ್ಯಂಡ್ ಕ್ರೈಮ್ (ಸೆನ್)ಪೊಲೀಸ್ ಠಾಣೆಗಳಿವೆ. ಇದೀಗ ಮತ್ತೆ ಮಂಗಳೂರು ಮತ್ತು ಉಡುಪಿ ಮಣಿಪಾಲವನ್ನು ಕೇಂದ್ರೀಕರಿಸಿಕೊಂಡು ಹೆಚ್ಚುವರಿ ಸೆನ್ ಪೊಲೀಸ್ ಠಾಣೆ ಗಳನ್ನು ಒದಗಿಸಲಾಗುವುದು. ಅದರ ಜತೆ ಜನ ಸ್ನೇಹಿ ನೈಟ್ ಬೀಟ್ ಮಾಡಲು ಚರ್ಚಿಸಲಾಗಿದೆ. ಅದಕ್ಕೆ ಐಜಿಪಿ ನೀಲನಕ್ಷೆ ತಯಾರು ಮಾಡಲಿದ್ದಾರೆ. ಗಡಿ ಭಾಗಗಳಲ್ಲಿ ನಿಗಾ ವಹಿಸಲು ಚರ್ಚಿಲಾಗಿದೆ ಎಂದು ಅವರು ವಿವರಿಸಿದರು.

ಸ್ಥಳೀಯ ಶಾಸಕ ಹರೀಶ್ ಪೂಂಜ, ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಉಪಸ್ಥಿತರಿದ್ದರು

ಅಕ್ರಮ ನಿವಾಸಿಗಳ ಕುರಿತು ಡಾಟಾ ಸಂಗ್ರಹ

ಎನ್‌ಆರ್‌ಸಿ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪ್ರಸ್ತುತ ಅಂಕಿಅಂಶಗಳನ್ನು ಸಂಗ್ರಹಿಸಬೇಕಿದೆ. ಇದರಿಂದ ಇಲ್ಲಿರುವ ಯಾವುದೇ ಸಮುದಾಯಕ್ಕೆ ತೊಂದರೆ ಮಾಡುವುದಿಲ್ಲ. ಇದು ಸ್ಪಷ್ಟ. ನಮ್ಮ ದೇಶದ ಯಾವುದೇ ರಾಜ್ಯದಿಂದ ಬಂದವರಿಗೂ ತೊಂದರೆ ಆಗದು. ಅನುಮತಿ ಇಲ್ಲದೆ, ದಾಖಲೆಗಳಿಲ್ಲದೆ, ಅವಧಿ ಮೀರಿ ವಾಸಿಸುವವರ ಬಗ್ಗೆ ಮಾಹಿತಿ ಅಗತ್ಯ. ಅವರೇನಾದರೂ ಅಪರಾಧ ಕೃತ್ಯವ ನಡೆಸಿ ಹೋದರೆ ಕಷ್ಟ. ಅಷ್ಟು ಸೂಚನೆ ಮಾತ್ರ ನೀಡಲಾಗಿದೆ. ಎನ್‌ಆರ್‌ಸಿ ಮಾಡುವುದು ರಾಷ್ಟ್ರೀಯ ನೀತಿ. ಅದನ್ನು ಕೇಂದ್ರ ಗೃ ಸಚಿವಾಲಯ ನಿರ್ಧರಿಸಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News