ಡೆಲಿವರಿ ಬಾಯ್ ನ ಧರ್ಮದ ಕಾರಣ ನೀಡಿ ಆಹಾರ ಬೇಡವೆಂದ ‘ಸ್ವಿಗ್ಗಿ’ ಗ್ರಾಹಕ

Update: 2019-10-24 14:14 GMT
ಸಾಂದರ್ಭಿಕ ಚಿತ್ರ

ಹೈದರಾಬಾದ್, ಅ.24: ಮುಸ್ಲಿಂ ವ್ಯಕ್ತಿಯು ತಂದಿದ್ದ ಆಹಾರವನ್ನು ಸ್ವೀಕರಿಸಲು ಹೈದರಾಬಾದ್‌ನ ಸ್ವಿಗ್ಗಿ ಗ್ರಾಹಕನೋರ್ವ ತಿರಸ್ಕರಿಸಿದ್ದಾನೆ. ಆ್ಯಪ್‌ನಲ್ಲಿ ಆಹಾರಕ್ಕೆ ಬೇಡಿಕೆ ಸಲ್ಲಿಸುವಾಗ ಅದನ್ನು ಹಿಂದು ವ್ಯಕ್ತಿಯ ಮೂಲಕ ವಿತರಿಸುವಂತೆ ಈ ಗ್ರಾಹಕ ಸ್ವಿಗ್ಗಿಗೆ ಸೂಚಿಸಿದ್ದ.

ಆಲಿಯಾಬಾದ್ ನಿವಾಸಿ ಅಜಯ ಕುಮಾರ್ ಎಂಬ ಗ್ರಾಹಕನಿಗೆ ಚಿಕನ್-65 ಪೂರೈಸಲು ತೆರಳಿದ್ದ ಮುದಸ್ಸಿರ್ ಉಮರ್ ಬುಧವಾರ ಈ ಬಗ್ಗೆ ದೂರು ಸಲ್ಲಿಸಿದ್ದು,ಪೊಲೀಸರಿನ್ನೂ ಪ್ರಕರಣವನ್ನು ದಾಖಲಿಸಿಕೊಂಡಿಲ್ಲ.

ಸ್ವಿಗ್ಗಿಯಿಂದ ಆಹಾರ ಪೂರೈಕೆಯ ಹೊಣೆಯನ್ನು ಹೊತ್ತಿದ್ದ ಉಮರ್(32) ಕುಮಾರ್ ನಿವಾಸದ ದಾರಿ ತಿಳಿದುಕೊಳ್ಳಲು ಕರೆ ಮಾಡಿದ್ದರು. ಉಮರ್ ಹೆಸರು ಕೇಳಿದಾಕ್ಷಣ ಉರಿದೆದ್ದು ಕೂಗಾಡಿದ್ದ ಕುಮಾರ್ ಬೇಡಿಕೆಯನ್ನು ರದ್ದು ಮಾಡುತ್ತಿರುವುದಾಗಿ ತಿಳಿಸಿದ್ದ. ಕುಮಾರ್ ಹಣವನ್ನು ಮರುಪಾವತಿಸುವಂತೆ ಕೋರಿ ಸ್ವಿಗ್ಗಿಯ ಕಸ್ಟಮರ್ ಕೇರ್‌ಗೆ ಕರೆ ಮಾಡಿದ್ದ. 95 ರೂ.ರದ್ದತಿ ಶುಲ್ಕವನ್ನು ಪಾವತಿಸಲೂ ಒಪ್ಪಿಕೊಂಡಿದ್ದ ಆತ,ಹಣ ಕಳೆದುಕೊಳ್ಳುವ ಬಗ್ಗೆ ತಾನು ತಲೆ ಕೆಡಿಸಿಕೊಂಡಿಲ್ಲ,ಆದರೆ ಮುಸ್ಲಿಂ ವ್ಯಕ್ತಿಯಿಂದ ಎಂದೂ ಆಹಾರ ಸ್ವೀಕರಿಸುವುದಿಲ್ಲ ಎಂದು ಹೇಳಿದ್ದ.

ಕುಮಾರ್ ಆಹಾರಕ್ಕಾಗಿ ಬೇಡಿಕೆ ಸಲ್ಲಿಸಿದ್ದ ಗ್ರಾಂಡ್ ಬಾವರ್ಚಿ ರೆಸ್ಟೋರಂಟ್ ಮುಸ್ಲಿಂ ವ್ಯಕ್ತಿಗೆ ಸೇರಿದೆ ಎಂದು ಹೇಳಿದ ಮಜ್ಲಿಸ್ ಬಚಾವೊ ತೆಹ್ರೀಕ್ ಪಕ್ಷದ ಅಧ್ಯಕ್ಷ ಅಮಾನುಲ್ಲಾ ಖಾನ್ ಅವರು ಪೊಲೀಸ್ ದೂರು ದಾಖಲಿಸುವಂತೆ ಸ್ವಿಗ್ಗಿಗೆ ಸೂಚಿಸಿರುವುದಾಗಿ ತಿಳಿಸಿದರು. ಸ್ವಿಗ್ಗಿ ಈ ಕುರಿತು ಈವರೆಗೂ ಹೇಳಿಕೆಯನ್ನು ನೀಡಿಲ್ಲ.

ಕಳೆದ ಜುಲೈನಲ್ಲಿ ಝೊಮಾಟೊದ ಗ್ರಾಹಕ ಕೂಡ ಪವಿತ್ರ ‘ಶ್ರಾವಣ ಮಾಸ ’ದಲ್ಲಿ ಮುಸ್ಲಿಂ ವ್ಯಕ್ತಿ ತಂದಿದ್ದ ಆಹಾರವನ್ನು ತಿರಸ್ಕರಿಸಿದ್ದ. ಹಿಂದು ವ್ಯಕ್ತಿಯ ಮೂಲಕವೇ ಆಹಾರವನ್ನು ಪೂರೈಸಬೇಕೆಂಬ ಆತನ ಬೇಡಿಕೆಯನ್ನು ತಿರಸ್ಕರಿಸಿದ್ದ ಝೊಮಾಟೊ, ಆಹಾರಕ್ಕೆ ಯಾವುದೇ ಧರ್ಮವಿಲ್ಲ ಎಂದು ಬಳಿಕ ಟ್ವೀಟಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News