ಅಸ್ಸಾಮಿನಿಂದ ಎನ್‌ಆರ್‌ಸಿ ಸಂಯೋಜಕರ ವರ್ಗಾವಣೆಗೆ ಹೆಚ್ಚಿನ ಗಡುವು ಕೋರಿದ ಕೇಂದ್ರ

Update: 2019-10-24 14:21 GMT

ಹೊಸದಿಲ್ಲಿ, ಅ.24: ಕೇಂದ್ರವು ಅಸ್ಸಾಮಿನ ಎನ್‌ಆರ್‌ಸಿ ಸಂಯೋಜಕ ಪ್ರತೀಕ ಹಜೇಲಾ ಅವರನ್ನು ಮಧ್ಯಪ್ರದೇಶಕ್ಕೆ ವರ್ಗಾವಣೆಗೊಳಿಸಲು ಇನ್ನಷ್ಟು ಸಮಯಾವಕಾಶವನ್ನು ಕೋರಿ ಅರ್ಜಿಯೊಂದನ್ನು ಗುರುವಾರ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದೆ.

ಹಜೇಲಾ ಅವರನ್ನು ಏಳು ದಿನಗಳಲ್ಲಿ ಮಧ್ಯಪ್ರದೇಶಕ್ಕೆ ವರ್ಗಾಯಿಸುವಂತೆ ಸರ್ವೋಚ್ಚ ನ್ಯಾಯಾಲಯವು ಅ.18ರಂದು ಕೇಂದ್ರ ಮತ್ತು ಅಸ್ಸಾಂ ಸರಕಾರಗಳಿಗೆ ಆದೇಶಿಸಿತ್ತು. ವರ್ಗಾವಣೆಗೆ ಕಾರಣವನ್ನು ಅದು ತಿಳಿಸಿರಲಿಲ್ಲ.

ಹಜೇಲಾರನ್ನು ಅವರ ತವರು ರಾಜ್ಯಕ್ಕೆ ವರ್ಗಾವಣೆಗೊಳಿಸುವ ಮುನ್ನ ಕೆಲವು ಔಪಚಾರಿಕತೆಗಳನ್ನು ಪೂರ್ಣಗೊಳಿಸಬೇಕಿದೆ ಎಂದು ಕೇಂದ್ರದ ಪರ ವಕೀಲರು ತಿಳಿಸಿದಾಗ,ಅರ್ಜಿಯನ್ನು ಸಲ್ಲಿಸುವಂತೆ ನ್ಯಾಯಮೂರ್ತಿಗಳಾದ ಎಸ್.ಎ.ಬೊಬ್ಡೆ ಮತ್ತು ಎಸ್.ಎ.ನಝೀರ್ ಅವರನ್ನೊಳಗೊಂಡ ಪೀಠವು ಸೂಚಿಸಿತು.

 ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಎನ್‌ಆರ್‌ಸಿ ಸಂಯೋಜಕರಾಗಿ ನೇಮಕಗೊಂಡಿದ್ದ ಹಜೇಲಾ ಸೆಪ್ಟೆಂಬರ್, 2013ರಿಂದಲೂ ಎನ್‌ಆರ್‌ಸಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದರು. ಮೂಲತಃ ಮಧ್ಯಪ್ರದೇಶ ದವರಾದ ಅವರು 1995ರ ತಂಡದ ಅಸ್ಸಾಂ-ಮೇಘಾಲಯ ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದಾರೆ.

 ಆ.31ರಂದು ಎನ್‌ಆರ್‌ಸಿ ಅಂತಿಮ ಪಟ್ಟಿ ಪ್ರಕಟಗೊಂಡ ಬಳಿಕ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಎನ್‌ಆರ್‌ಸಿ ಮತ್ತು ಹಜೇಲಾ ಅವರನ್ನು ಸಾಕಷ್ಟು ಟೀಕಿಸಿದ್ದಾರೆ. ಹಜೇಲಾ ತನ್ನ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ತರುಣ್ ಗೊಗೊಯಿ ಅವರು ಕಳೆದ ಸೆಪ್ಟೆಂಬರ್‌ನಲ್ಲಿ ಭಾರತದ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ಅವರಿಗೆ ದೂರನ್ನು ಸಲ್ಲಿಸಿದ್ದರು. ಇದಕ್ಕೂ ಮುನ್ನ ಪರಿಷ್ಕೃತ ಎನ್‌ಆರ್‌ಸಿಯಿಂದ ನಿಜವಾದ ಭಾರತೀಯರನ್ನು ಉದ್ದೇಶಪೂರ್ವಕವಾಗಿ ಹೊರಗಿರಿಸಿದ್ದಾರೆ ಎಂದು ಆರೋಪಿಸಿ ಹಜೇಲಾ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿದ್ದವು.

ಹಜೇಲಾರ ಪಾಸ್‌ಪೋರ್ಟ್ ಅನ್ನು ವಶಪಡಿಸಿಕೊಳ್ಳುವಂತೆ ಎನ್‌ಜಿಒ ಅಸ್ಸಾಂ ಪಬ್ಲಿಕ್ ವರ್ಕ್ಸ್ ಮಂಗಳವಾರ ಆಗ್ರಹಿಸಿತ್ತು. ಎನ್‌ಜಿಒದ ಅರ್ಜಿಯ ಮೇರೆಗೆ ಸರ್ವೋಚ್ಚ ನ್ಯಾಯಾಲಯವು ಅಸ್ಸಾಮಿನಲ್ಲಿ ಎನ್‌ಆರ್‌ಸಿ ಪರಿಷ್ಕರಣೆ ಪ್ರಕ್ರಿಯೆಯ ಉಸ್ತುವಾರಿ ವಹಿಸಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News