ದ.ಕ. ಜಿಲ್ಲಾ ಎಸ್ಪಿ ಕಚೇರಿ ಸ್ಥಳಾಂತರ ಬಗ್ಗೆ ಶೀಘ್ರ ನಿರ್ಧಾರ: ಗೃಹಸಚಿವ ಬಸವರಾಜ್ ಬೊಮ್ಮಾಯಿ
ಬಂಟ್ವಾಳ, ಅ.24: ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಕಚೇರಿ ಸ್ಥಳಾಂತರದ ಬಗ್ಗೆ ಶೀಘ್ರದಲ್ಲೇ ಬೆಂಗಳೂರಿನಲ್ಲಿ ಸಭೆ ನಡೆಸಿ ಸ್ಪಷ್ಟ ತೀರ್ಮಾನ ಕೈಗೊಳ್ಳುವುದಾಗಿ ಕರ್ನಾಟಕ ರಾಜ್ಯ ಗೃಹಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಬಂಟ್ವಾಳ ನಿರೀಕ್ಷಣಾ ಮಂದಿರದಲ್ಲಿ ಪಶ್ಚಿಮವಲಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು. ಜಿಲ್ಲಾ ಎಸ್ಪಿ ಕಚೇರಿ ಸ್ಥಳಾಂತರ ಬಂಟ್ವಾಳಕ್ಕೋ? ಅಥವಾ ಪುತ್ತೂರಿಗೋ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಕುರಿತಾಗಿ ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ನಡೆಸುವುದಾಗಿ ತಿಳಿಸಿದರು.
ಬಂಟ್ವಾಳ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಬಂಟ್ವಾಳ ನಗರ ಹಾಗೂ ಗ್ರಾಮಾಂತರಕ್ಕೆ ಪ್ರತ್ಯೇಕ ವೃತ್ತನಿರೀಕ್ಷಕರನ್ನು ನೇಮಿಸಲಾಗುವುದು. ಈ ಸಂದರ್ಭ ಪೆÇಲೀಸ್ ಸಿಬ್ಬಂದಿ ಸಂಖ್ಯೆ ಹೆಚ್ಚಳವಾಗಲಿದೆ. ಸೂಕ್ಷ್ಮ ಪ್ರದೇಶವಾದ ಬಂಟ್ವಾಳದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಕರಾವಳಿಯ ಭದ್ರತಾ ಪಡೆಯ ಬಲವರ್ಧನೆ
ಕರಾವಳಿಯ ಭದ್ರತಾ ಪಡೆಯ ಬಲವರ್ಧನೆಗೊಳಿಸಿ, ತೀರ ಪ್ರದೇಶ ಸುರಕ್ಷತೆಗೆ ಗರಿಷ್ಠ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಕರ್ನಾಟಕದಲ್ಲೇ ಅತ್ಯಂತ ಹೆಚ್ಚು ಪೊಲೀಸ್ ಕ್ವಾಟ್ರಸ್ ಇದ್ದು, ಶೇ.60ರಷ್ಟು ಇರುವ ಕ್ವಾಟ್ರಸ್‍ಗಳ ಸಂಖ್ಯೆಯನ್ನು ಮುಂದಿನ ಮೂರುವರ್ಷಗಳಲ್ಲಿ ಶೇ.80ಕ್ಕೆ ಏರಿಸುವ ಗುರಿ ಇರಿಸಲಾಗಿದೆ ಎಂದು ಹೇಳಿದ ಬೊಮ್ಮಾಯಿ, ರಾತ್ರಿ ಕಾರ್ಯನಿರ್ವಹಿಸುವ ಪೊಲೀಸರ ಜೊತೆ ಜನರನ್ನೂ ಪಾಲ್ಗೊಳ್ಳುವಂತೆ ಮಾಡುವ ಜನಸ್ನೇಹಿ ವ್ಯವಸ್ಥೆಯನ್ನು ಜಾರಿಗೊಳಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಯು.ರಾಜೇಶ್ ನಾಯ್ಕ್, ಬಂಟ್ವಾಳ ಕೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ, ಪುರಸಭಾ ಸದಸ್ಯ ಗೋವಿಂದ ಪ್ರಭು, ರಾಜ್ಯ ಸಹ ವಕ್ತಾರೆ ಸುಲೋಚನಾ ಭಟ್ ಜಿ.ಕೆ. ಪ್ರ.ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ತಾಪಂ ಸದಸ್ಯ ಪ್ರಭಾಕರ ಪ್ರಭು, ಪುರುಷೋತ್ತಮ ಶೆಟ್ಟಿ, ಉದಯಕುಮಾರ್ ರಾವ್ ಬಂಟ್ವಾಳ, ರಮಾನಾಥ ರಾಯಿ, ಸುದರ್ಶನ್ ಬಜ ಮೊದಲಾದವರಿದ್ದರು.
ಪೊಲೀಸ್ ಪಶ್ಚಿಮವಲಯ ಅಧಿಕಾರಿಗಳ ಪ್ರಗತಿ ಪರಿಶೀಲನೆ:
ಇದಕ್ಕೂ ಮೊದಲು ಗೃಹಸಚಿವರು ಪೊಲೀಸ್ ಇಲಾಖೆಯಿಂದ ಗೌರವ ವಂದನೆ ಸ್ವೀಕರಿಸಿದರು. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಚುನಾವಣೆಯ ಹಿನ್ನಲೆಯಲ್ಲಿ ಗೃಹಸಚಿವರು ಪೊಲೀಸ್ ಪಶ್ಚಿಮವಲಯ ವ್ಯಾಪ್ತಿಯ ಅಧಿಕಾರಿಗಳ ಪ್ರಗತಿ ಪರಿಶೀಲನೆಯನ್ನು ಬಂಟ್ವಾಳ ಪ್ರವಾಸಿಮಂದಿರದಲ್ಲಿ ನಡೆಸಿದರು.
ಪಶ್ಚಿಮವಲಯದ ಐಜಿಪಿ ಅರುಣ್ ಚಕ್ರವರ್ತಿ, ದ.ಕ. ಜಿಲ್ಲಾ ಎಸ್ಪಿ ಲಕ್ಷ್ಮೀಪ್ರಸಾದ್, ಉಡುಪಿ ಜಿಲ್ಲಾ ಎಸ್ಪಿ ನಿಶಾ ಜೇಮ್ಸ್, ಚಿಕ್ಕಮಗಳೂರು ಎಸ್ಪಿ ಹರೀಶ್ ಪಾಂಡೆ, ಉತ್ತರ ಕನ್ನಡ ಎಸ್ಪಿ ಶಿವಪ್ರಕಾಶ್, ಪುತ್ತೂರು ಡಿವೈಎಸ್ಪಿ ದಿನಕರ ಶೆಟ್ಟಿ ಸಹಿತ ಉನ್ನತ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡರು.
ಇದೇ ಮೊದಲಬಾರಿಗೆ ಬಂಟ್ವಾಳಕ್ಕಾಗಮಿಸಿದ ಗೃಹಸಚಿವರನ್ನು ಶಾಸಕ ಯು.ರಾಜೇಶ್ ನಾಯ್ಕ್ ಹಾಗೂ ತಹಶೀಲ್ದಾರ್ ರಶ್ಮೀ ಎಸ್.ಆರ್. ಸ್ವಾಗತಿಸಿದರು. ಬಂಟ್ವಾಳ ಸರ್ಕಲ್ ಇನ್‍ಸ್ಪೆಕ್ಟರ್ ಟಿ.ಡಿ. ನಾಗರಾಜ್, ಎಸ್ಸೈಗಳಾದ ಚಂದ್ರಶೇಖರ್, ಪ್ರಸನ್ನ ಸಹಿತ ವಿವಿಧ ಠಾಣೆಗಳ ಪೊಲೀಸ್ ಉಪನಿರೀಕ್ಷಕರು ಬಂದೋಬಸ್ತ್ ವಹಿಸಿದ್ದರು.
ಬಂಟ್ವಾಳ ನಗರ ಠಾಣೆ ಮೇಲ್ದರ್ಜೆಗೆ
ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಈ ಹಿಂದೆ ಅಧಿವೇಶನದ ಸಂದರ್ಭದಲ್ಲಿ ರಾಜ್ಯ ಗೃಹಸಚಿವ ಬಸವರಾಜ್ ಬೊಮ್ಮಾಯಿಯವರಿಗೆ ಬಂಟ್ವಾಳ ನಗರ ಠಾಣೆ ಮೇಲ್ದರ್ಜೆಗೇರಿಸಲು ಮನವಿ ಸಲ್ಲಿಸಿದ್ದು, ಈ ದಿನ ರಾಜ್ಯ ಗೃಹಸಚಿವರು ಬಂಟ್ವಾಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಚಿವರ ಗಮನಕ್ಕೆ ಮತ್ತೊಮ್ಮೆ ಈ ವಿಚಾರ ತಂದಿದ್ದಾರೆ. ಗೃಹ ಸಚಿವರು ಬಂಟ್ವಾಳ ನಗರ ಠಾಣೆಯನ್ನು ಮೇಲ್ದರ್ಜೆ ಗೇರಿಸಲು ಒಪ್ಪಿದ್ದು ಶೀಘ್ರವಾಗಿ ಜಾರಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬಂಟ್ವಾಳ ನಗರ ಠಾಣೆ ಮೇಲ್ದರ್ಜೆಗೊಂಡಲ್ಲಿ ಹೆಚ್ಚುವರಿ ವೃತ್ತ ನೀರೀಕ್ಷಕ ಹುದ್ದೆ, ಸಿಬ್ಬಂದಿ ವರ್ಗದಲ್ಲಿ ಹೆಚ್ಚಳ, ಇಲಾಖೆಯ ಸೌಲಭ್ಯಗಳು ಸಿಗಲಿದ್ದು, ಅತಿಸೂಕ್ಷ್ಮ ಪ್ರದೇಶವಾದ ಬಂಟ್ವಾಳದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ನೆರವಾಗಲಿದೆ.
ಮನಪಾ ಚುನಾವಣೆ ಹಿನ್ನೆಲೆ: ಜಿಲ್ಲಾ ಮಟ್ಟದ ಚಟುವಟಿಕೆ ಬಂಟ್ವಾಳಕ್ಕೆ ವರ್ಗಾವಣೆ
ಮಂಗಳೂರು ಮಹಾನಗರಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪಕ್ಕದ ಬಂಟ್ವಾಳದಲ್ಲಿ ಜಿಲ್ಲಾ ಮಟ್ಟದ ಚಟುವಟಿಕೆ ಗಳು ವರ್ಗಾವಣೆಗೊಂಡಿವೆ.
ಬುಧವಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾಮಾನ್ಯ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಸಭೆ ನಡೆಯಿತು. ಜಿಲ್ಲಾ ಪಂಚಾಯತ್ ನ ಸ್ಥಾಯಿ ಸಮಿತಿ ಸಭೆಯೊಂದು ಜಿಲ್ಲಾ ಕೇಂದ್ರವನ್ನು ಬಿಟ್ಟು ತಾಲೂಕು ಕೇಂದ್ರವೊಂದರಲ್ಲಿ ನಡೆದಿದೆ. ಅದೇ ರೀತಿ ಗುರುವಾರ ಪೊಲೀಸ್ ಪಶ್ಚಿಮವಲಯ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆಯು ಬಂಟ್ವಾಳ ನಿರೀಕ್ಷಣಾ ಮಂದಿರದಲ್ಲಿ ಇದೇ ಮೊದಲ ಬಾರಿ ನಡೆದಿದೆ.