×
Ad

ದ.ಕ. ಜಿಲ್ಲೆಯಲ್ಲಿ ಮತ್ತೆ ರೆಡ್ ಅಲರ್ಟ್ ಘೋಷಣೆ: ಇನ್ನೂ ಎರಡು ದಿನ ಭಾರೀ ಮಳೆ

Update: 2019-10-24 22:14 IST

ಮಂಗಳೂರು, ಅ.24: ಅರಬಿ ಸಮುದ್ರ ಮತ್ತು ಲಕ್ಷ ದ್ವೀಪದಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನಲೆಯಲ್ಲಿ ಗುರುವಾರವಿಡೀ ದ.ಕ. ಜಿಲ್ಲಾದ್ಯಂತ ಬಿರುಸಿನ ಮಳೆಯಾಗಿದೆ. ಅಲ್ಲದೆ ಅ.25, 26ರಂದು ಕೂಡಾ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಆ ಹಿನ್ನಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಮತ್ತೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಅಲ್ಲದೆ ಜಿಲ್ಲಾದ್ಯಂತ ಅದರಲ್ಲೂ ಕಡಲ ಕಿನಾರೆಯುದ್ದಕ್ಕೂ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚಿಸಿದೆ.

ದ.ಕ.ಜಿಲ್ಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರವು ರೆಡ್ ಅಲರ್ಟ್ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಅ. 25 ಮತ್ತು 26ರಂದು 115.5 ಮಿ.ಮೀ ನಿಂದ 204.4 ಮಿ ಮೀ ವರೆಗೆ ಮಳೆ ಬೀಳುವ ಸಾಧ್ಯತೆ ಇದೆ. ಈ ಮಧ್ಯೆ ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಹವಾಮಾನ ಇಲಾಖೆ ಸೂಚನೆ ನೀಡಿದಂತೆ ಗುರುವಾರ ಕರಾವಳಿಯಲ್ಲಿ ಹಿಂಗಾರು ಮಳೆಯು ಬಿರುಸುಗೊಂಡಿತ್ತು. ದಿನವಿಡೀ ಮೋಡ ಕವಿದ ವಾತಾವರಣದ ಮಧ್ಯೆ ಮಳೆಯ ಆರ್ಭಟವಿತ್ತು. ತೋಟ ಬೆಂಗರೆಯಲ್ಲಿ ಹಳೆಯ ಶಾಲೆಯ ಹೆಂಚಿನ ಮೇಲೆ ಮರದ ಗೆಲ್ಲು ಬಿದ್ದು ಹಾನಿಯಾದ ಬಗ್ಗೆ ವರದಿಯಾಗಿದೆ. ಅ.25,26ರಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಸೂಚನೆ ನೀಡಿದ ಕಾರಣ ಜಿಲ್ಲಾಡಳಿತ ಸಕಲ ರೀತಿಯಲ್ಲೂ ವಿಪತ್ತು ಎದುರಿಸಲು ಸಜ್ಜಾಗಿವೆ.

ತುರ್ತು ಸೇವೆಗೆ ದಿನದ 24 ಗಂಟೆಯೂ 1077 ಅಥವಾ ವಾಟ್ಸ್‌ಆ್ಯಪ್ ಸಂಖ್ಯೆ 9483908000ನ್ನು ಸಂಪರ್ಕಿಸಲು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕರಿ ಸೂಚಿಸಿದ್ದಾರೆ.

ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ

ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಅ.26ರವರೆಗೆ ಅರಬ್ಬೀ ಸಮುದ್ರವು ಪ್ರಕ್ಷುಬ್ಧವಾಗುವ ಸಾಧ್ಯತೆ ಇದೆ. ಹಾಗಾಗಿ ಅನಾಹುತವನ್ನು ತಡೆಯುವ ಸಲುವಾಗಿ ಮೀನುಗಾರರು ಸಮುದ್ರಕ್ಕಿಳಿಯದಂತೆ ಹಾಗೂ ಮೀನುಗಾರಿಕೆಗೆ ತೆರಳಿರುವ ಎಲ್ಲಾ ಮೀನುಗಾರಿಕೆ ದೋಣಿಗಳು ಕೂಡಲೇ ದಡ ಸೇರುವಂತೆ ಮುನ್ನೆಚ್ಚರಿಕೆ ನೀಡಲಾಗಿದೆ ಎಂದು ದ.ಕ.ಜಿಲ್ಲಾ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರ ಪ್ರಕಟನೆ ತಿಳಿಸಿದೆ.

ಮಳೆ ಪ್ರಮಾಣ: ಕಳೆದ ವರ್ಷ ಅಕ್ಟೋಬರ್ 24ರಂದು ಒಂದು ಹನಿ ಮಳೆಯೂ ಸುರಿಯಲಿಲ್ಲ. ಆದರೆ, ಈ ವರ್ಷದ ಅಕ್ಟೋಬರ್ 24ರಂದು ಬಂಟ್ವಾಳದಲ್ಲಿ 81.8 ಮಿ.ಮೀ., ಬೆಳ್ತಂಗಡಿಯಲ್ಲಿ 56.5 ಮಿ.ಮೀ., ಮಂಗಳೂರಿನಲ್ಲಿ 63.6 ಮಿ.ಮೀ., ಪುತ್ತೂರಿನಲ್ಲಿ 63.4 ಮಿ.ಮೀ., ಸುಳ್ಯದಲ್ಲಿ 30.4 ಮಿ.ಮೀ. ಮಳೆಯಾಗಿದೆ. ಅಂದರೆ ಜಿಲ್ಲೆಯಲ್ಲಿ ಒಟ್ಟು 59.1 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಅಕ್ಟೋಬರ್ 24ರವರೆಗೆ 265.1 ಮಿ.ಮೀ. ಮಳೆಯಾಗಿದ್ದರೆ, ಈ ವರ್ಷ 336.9 ಮಿ.ಮೀ. ಮಳೆಯಾಗಿದೆ. ಈ ವರ್ಷದ ಜನವರಿಯಿಂದ ಈವರೆಗೆ 3,806.2 ಮಿ.ಮೀ. ಮಳೆಯಾಗಿದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಈವರೆಗೆ ಕಡಿಮೆ ಮಳೆಯಾಗಿದೆ. ಅಂದರೆ, ಕಳೆದ ವರ್ಷ ಈವರೆಗೆ 4,577.7 ಮಿ.ಮೀ. ಮಳೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News