ಮನಪಾ ನೀರಿನ ದರ ಏರಿಕೆ: ಬಿಲ್ ಪಾವತಿಸದೆ ಅಸಹಕಾರ ಚಳುವಳಿ ನಡೆಸಲು ಡಿವೈಎಫ್‌ಐ ತೀರ್ಮಾನ
ಮಂಗಳೂರು, ಅ.24: ಮಂಗಳೂರು ಮಹಾನಗರ ಪಾಲಿಕೆಯು ಯಾವುದೆ ಮುನ್ಸೂಚನೆ ನೀಡದೆ 2019ರ ಎಪ್ರಿಲ್ನಿಂದ ಅನ್ವಯವಾಗುವಂತೆ ಕುಡಿಯುವ ನೀರಿನ ದರವನ್ನು ಐದಾರು ಪಟ್ಟು ಏರಿಕೆ ಮಾಡಿದೆ. ಈ ರೀತಿಯ ಏರಿಕೆಯು ನಗರದ ಜನಸಾಮಾನ್ಯರ ಪಾಲಿಗೆ ದೊಡ್ಡ ಹೊರೆಯಾಗಿದೆ. ಯಾವುದೇ ಪೂರ್ವ ಸೂಚನೆಯಿಲ್ಲದ ವಿಪರೀತ ದರ ಏರಿಕೆ ಮಾಡಿರುವುದನ್ನು ಡಿವೈಎಫ್‌ಐ ಮಂಗಳೂರು ನಗರ ಸಮಿತಿ ತೀವ್ರವಾಗಿ ಖಂಡಿಸಿದೆ. ಅಲ್ಲದೆ ಮನಪಾಕ್ಕೆ ಆರಿಸಿ ಬಂದ ಜನಪ್ರತಿನಿಧಿಗಳು ನೀರಿನ ದರ ಹೆಚ್ಚಳದ ಬಗ್ಗೆ ಸರಿಯಾದ ನಿರ್ಣಯ ಕೈಗೊಳ್ಳುವವರೆಗೂ ನೀರಿನ ಬಿಲ್ಲು ಕಟ್ಟದೆ ಅಸಹಕಾರ ಚಳುವಳಿಯನ್ನು ನಡೆಸಲು ತೀರ್ಮಾನಿಸಿದೆ.
ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತ ಇಲ್ಲದಿರುವ ಸಂದರ್ಭ ನಗರದ ಶಾಸಕರ ಗಮನಕ್ಕೂ ತಾರದೆ ಪಾಲಿಕೆ ಕಮಿಷನರ್ ಮತ್ತು ಜಿಲ್ಲಾಧಿಕಾರಿ ದರ ಏರಿಕೆಯ ಆದೇಶವನ್ನು ಹೊರಡಿಸಿರುವುದು ಸರಿಯಾದ ವಿಧಾನವಲ್ಲ. ಇದು ಜನತಂತ್ರ ವ್ಯವಸ್ಥೆಯ ಆಶಯಕ್ಕೆ ವಿರುದ್ಧವಾಗಿದೆ. ಹನ್ನೊಂದು ವರ್ಷಗಳ ಹಿಂದೆ ಪ್ರಥಮ ಬಾರಿಗೆ ಮಂಗಳೂರು ಪಾಲಿಕೆಯು ನೀರಿನ ದರವನ್ನು ದೊಡ್ಡ ಮಟ್ಟದಲ್ಲಿ ಏರಿಕೆ ಮಾಡಿ ಖಾಸಾಗೀಕರಣಕ್ಕೆ ಮುಂದಾಗಿತ್ತು. ಆ ಸಂದರ್ಭ ಡಿವೈಎಫಐ, ಸಿಪಿಎಂ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಿಂದಾಗಿ ದರ ಏರಿಕೆ, ಖಾಸಗೀಕರಣವನ್ನು ಪಾಲಿಕೆ ಹಿಂದಕ್ಕೆ ಪಡೆದಿತ್ತು. ಆ ನಂತರ ಈ ವರಗೆ ದರ ಏರಿಕೆ ಆಗಿರಲಿಲ್ಲ. ಆದರೆ ಈಗ ದರವನ್ನು ನಾಲ್ಕರಿಂದ ಐದು ಪಟ್ಟು ಏರಿಕೆ ಮಾಡಲಾಗಿದೆ. ಈ ದರ ಏರಿಕೆಯನ್ನು ಶಾಸನಬದ್ದ ಜನಪ್ರತಿನಿಧಿಗಳಾದ ಶಾಸಕರನ್ನು ಕತ್ತಲಲ್ಲಿಟ್ಟು ಎಡಿಬಿ ಮುಂತಾದ ವಿದೇಶಿ ಬ್ಯಾಂಕ್‌ಗಳ ನಿರ್ದೇಶನದ ಪ್ರಕಾರ ಮಾಡಿರಿವುದು ಖಂಡನೀಯ.
ಈ ಹಿಂದೆ ತಿಂಗಳಿಗೆ 65 ರೂ. ಕನಿಷ್ಟ ದರ ನಿಗದಿ ಮಾಡಿ 25,000 ಲೀಟರ್ ನೀರು ನೀಡಲಾಗಿತ್ತು. ಆ ನಂತರದ ಒಂದು ಸಾವಿರ ಲೀಟರ್ ನೀರಿಗೆ ಕೇವಲ 3 ರೂ. ದರ ವಿಧಿಸಲಾಗುತ್ತಿತ್ತು. ಆದರೆ ಈಗ ಕನಿಷ್ಟ ನೀರಿನ ಪ್ರಮಾಣವನ್ನು 25,000 ಸಾವಿರ ಲೀಟರ್ ನಿಂದ 8,000 ಲೀಟರ್‌ಗೆ ಇಳಿಸಲಾಗಿದೆ. ಅಲ್ಲದೆ ನಂತರದ ಬಳಕೆಗೆ ಲೀಟರ್‌ಗೆ 3 ರೂ.ನಿಂದ 9 ರೂ. ಏರಿಕೆ ಮಾಡಲಾಗಿದೆ.
ಈ ಏರಿಕೆಯು ಏಕಮುಖ ಹಾಗೂ ಜನವಿರೋಧಿಯಾಗಿದೆ. ಹಾಗಾಗಿ ಡಿವೈಎಫ್‌ಐ ನೀರಿನ ದರ ಏರಿಕೆಯನ್ನು ಖಂಡಿಸಿ ನೀರಿನ ಬಿಲ್ಲು ಪಾವತಿಸದೆ ಅಸಹಕಾರ ಚಳುವಳಿ ನಡೆಸಲಿದೆ ಎಂದು ಡಿವೈಎಫ್‌ಐ ಮಂಗಳೂರು ನಗರ ಘಟಕದ ಮುಖಂಡರಾದ ನವೀನ್ ಕೊಂಚಾಡಿ, ಸಾದಿಕ್ ಕಣ್ಣೂರು ತಿಳಿಸಿದ್ದಾರೆ.