×
Ad

ಮಂಗಳೂರು ವಿವಿಯ ನಿವೃತ್ತ ಪ್ರಾಧ್ಯಾಪಕ ಪ್ರೊ.ರಘುರಾಮ್ ನಿಧನ

Update: 2019-10-24 22:50 IST

ಕೊಣಾಜೆ:  ಮಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ  ಪ್ರಾಧ್ಯಾಪಕರಾಗಿ, ವಿಭಾಗ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಹಿರಿಯ ಪ್ರಾಧ್ಯಾಪಕರಾದ ಪ್ರೊ.ರಘುರಾಮ್ ಅವರು ತಾವು ಸೇವೆ ಸಲ್ಲಿಸಿದ ವಾಣಿಜ್ಯ ವಿಭಾಗಕ್ಕೆ ಬಂದಿದ್ದಾಗ ಹೃದಯಾಘತದಿಂದ ಸ್ಥಳದಲ್ಲೇ ಕೊನೆಯುಸಿರೆಳೆದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.

 ಪ್ರೊ.ರಘುರಾಮ್ ಅವರು ಕಳೆದ ವರ್ಷವಷ್ಟೇ ಅವರು ಮಂಗಳೂರು ವಿವಿಯ ವಾಣಿಜ್ಯ ವಿಭಾಗದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.  ಬುಧವಾರದಂದು ಮಧ್ಯಾಹ್ನ ವಿಭಾಗಕ್ಕೆ ಆಗಮಿಸಿದ ಪ್ರೊ.ರಘುರಾಮ್ ಅವರು ತಾವು ಹಿಂದೆ ಕುಳಿತುಕೊಳ್ಳುತ್ತಿದ್ದ ತಮ್ಮ ಆಸನದಲ್ಲಿ ಕುಳಿತುಕೊಂಡಿದ್ದರು, ಆದ ಎದೆನೋವು ಕಾಣಿಸಿಕೊಂಡು ಅಲ್ಲೇ ಹೃದಯಾಘಾತದಿಂದ ಕುಸಿದಿದ್ದು, ಕೂಡಲೇ ಅವರ ಸಹೋದ್ಯೋಗಿಗಳು ಅವರನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದರೂ ಆಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು ಎನ್ನಲಾಗಿದೆ.

ವರ್ಕಾಡಿಯ ಬಡಕುಟುಂಬವೊಂದರಲ್ಲಿ ಜನಿಸಿದ ಪ್ರೊ,ರಘುರಾಮ್ ಅವರು ಕೊಡ್ಲಮೊಗರು ದೈಗೋಳಿಯ ವಾಣಿವಿಜಯ ಸ್ಕೂಲ್ ನಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿ ಬಳಿಕ ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಪಿಯುಸಿ ಮತ್ತು ಪದವಿ ವ್ಯಾಸಂಗವನ್ನು ಮುಗಿಸಿದ್ದರು. ಬಳಿಕ 1977ರಲ್ಲಿ ಮಂಗಳಗಂಗೋತ್ರಿಯಲ್ಲಿದ್ದ ಮೈಸೂರು ವಿಶ್ವವಿದ್ಯಾಲಯದ ಪಿ.ಜಿ.ಸೆಂಟರ್‍ನಲ್ಲಿ ಎಂಕಾಂ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದರು.

ಕನ್ಯಾನ, ಅಳಿಕೆ ಪದವಿಪೂರ್ವ ಕಾಲೇಜಿಗೆ ಉಪನ್ಯಾಸಕರಾಗಿ ಸೇವೆ ಆರಂಭಿಸಿದ ರಘುರಾಮ್ ಅವರು ಬಳಿಕ 1980 ರಲ್ಲಿ ಮಂಗಳೂರು ವಿಶ್ವವಿದ್ಯಾಲಯವು ಆರಂಭಗೊಂಡಾಗ ಅಲ್ಲಿ ಅತಿಥಿ ಉಪನ್ಯಾಸಕಾಗಿ ಸೇವೆ ಆರಂಭಿಸಿದರು. ನಂತರ ಪರಿಶ್ರಮದೊಂದಿಗೆ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ಡೀನ್ ಆಗಿ, ವಿಭಾಗದ ಅಧ್ಯಕ್ಷರಾಗಿ,  ಸೇವೆಸಲ್ಲಿಸುವುದರೊಂದಿಗೆಬವಾಣಿಜ್ಯ ವಿಭಾಗಕ್ಕೆ ಹಾಗೂ ಮಂಗಳೂರು ವಿವಿಯಲ್ಲಿ ಸಿಂಡಿಕೇಟ್ ಸದಸ್ಯರಾಗಿ ವಿವಿಧ ಜವಬ್ಧಾರಿಗಳನ್ನು ವಹಿಸಿಕೊಂಡು ವಿಶ್ವವಿದ್ಯಾಲಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಪ್ರಾಧ್ಯಾಪಕರಾಗಿದ್ದುಕೊಂಡು ಹಲವಾರು ಪಿಎಚ್‍ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು.

2018 ರಲ್ಲಿ ಅವರಿಗೆ ಹಳೆ ವಿದ್ಯಾರ್ಥಿಗಳು ಹಾಗೂ ಸಹೊಧ್ಯೋಗಿಗಳು ಸೇರಿಕೊಂಡು ಮಂಗಳೂರಿನಲ್ಲಿ ರಘುರಾಮಾಭಿನಂದನಾ  ಎಂಬ ಸನ್ಮಾನ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಿ ಪ್ರೊ.ರಘುರಾಮ್ ಅವರನ್ನು ಗೌರವಿಸಿದ್ದರು. ಅವಿವಾಹಿತರಾಗಿದ್ದ ಅವರು ತನ್ನ ತಂಗಿಯೊಂದಿಗೆ ಕೊಣಾಜೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅಲ್ಲದೆ ಮುಡಿಪು ಸಮೀಪ ನೂತನ ಮನೆಯನ್ನು ಕಟ್ಟುವ ಯೋಜನೆಯಲ್ಲಿದ್ದರು.

ಪ್ರೊ.ರಘುರಾಮ್ ಅವರ ನಿಧನಕ್ಕೆ ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ  ಹಾಗೂ ವಿವಿಯ ಕುಲಸಚಿವರು, ಪ್ರಾಧ್ಯಾಪಕರು ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News